ADVERTISEMENT

ಬಿಲ್ ಪಾವತಿಗೆ ಲಂಚ ಬೇಡಿಕೆ ಆರೋಪ; DCF ವಿರುದ್ಧ ಕ್ರಮ: ಡಿಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:28 IST
Last Updated 18 ಜನವರಿ 2025, 15:28 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

–ಫೇಸ್‌ಬುಕ್‌

ಬೆಂಗಳೂರು: ಬಿಬಿಎಂಪಿ ಅರಣ್ಯ ಘಟಕದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಬಿ.ಎಲ್‌.ಜಿ. ಸ್ವಾಮಿ ವಿರುದ್ಧ ಹಲವು ದೂರುಗಳು ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರ್ದೇಶನ ನೀಡಿದ್ದಾರೆ.

ADVERTISEMENT

‘ಯಲಹಂಕ ವಲಯ, ಹೆಬ್ಬಾಳ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ‘ಕಳೆದ ಮೇ 7ರಿಂದ ಜೂನ್‌ 25ರ ಅವಧಿಯಲ್ಲಿ ಭಾರಿ ಮಳೆ ಗಾಳಿಗೆ ಮುರಿದು ಬಿದ್ದ ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ಕಾಮಗಾರಿಯ ಗುತ್ತಿಗೆ ಹಣ ಪಾವತಿಸಲು ಬಿಲ್‌ನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವಂತೆ ಮನವಿ ಮಾಡಿದಾಗ ಬಿ.ಎಲ್‌.ಜಿ. ಸ್ವಾಮಿ ಶೇ 15ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿ ಗುತ್ತಿಗೆದಾರ ವಿ. ಶ್ರೀನಿವಾಸ ಅವರು ಉಪ ಮುಖ್ಯಮಂತ್ರಿಗೆ ದೂರು ನೀಡಿದ್ದರು.

‘ದಲಿತ ಕುಟುಂಬದವನಾಗಿರುವ ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬಿಲ್‌ಅನ್ನು ಈ ಹಿಂದೆಯೇ ಸಲ್ಲಿಸಿದ್ದು, ನ. 22ರಂದು ಬಿ.ಎಲ್‌.ಜಿ. ಸ್ವಾಮಿ ಅವರನ್ನು ಭೇಟಿ ಮಾಡಿದ್ದೆ. ಕಮಿಷನ್‌ ಕೊಡಲು ಆಗುವುದಿಲ್ಲ ಎಂದು ನಾನು ಹೇಳಿದಾಗ ಏರುಧ್ವನಿಯಲ್ಲಿ ಕೂಗಾಡಿದ ಅವರು, ನನ್ನನ್ನು ಕಚೇರಿಯಿಂದ ಹೊರಗೆ ಹಾಕಿದ್ದರು. ಅಲ್ಲದೆ, ಆ ನಂತರ ಕರ್ತವ್ಯಕ್ಕೆ ಅಡ್ಡಿಪಡಿಸಿದೆನೆಂದು ನನ್ನ ವಿರುದ್ಧವೇ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಡಿ. 2ರಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ನಿರ್ವಹಿಸಿದ ಕಾಮಗಾರಿಯ ಬಿಲ್‌ ಪಾವತಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಬೇಕು. ಬಿಲ್‌ ಪಾವತಿ ಆಗದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಬಹುದು. ಇದಕ್ಕೆ ಬಿ.ಎಲ್‌.ಜಿ. ಸ್ವಾಮಿಯೇ ನೇರ ಹೊಣೆಯಾಗುತ್ತಾರೆ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರಿನ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ, ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಶ್ರೀನಿವಾಸ್ ನೀಡಿದ್ದಾರೆ.

ಮರ ಕಡಿದ ಆರೋಪ: ವರದಿ ನೀಡಲು ಖಂಡ್ರೆ ಸೂಚನೆ

ರಾಜರಾಜೇಶ್ವರಿ ನಗರದಲ್ಲಿ ನಾಲ್ಕು ದಶಕಗಳಿಂದ ಬೆಳೆದಿದ್ದ ಮರವನ್ನು ವಿನಾ ಕಾರಣ ಕಡಿದ ಕುರಿತು ‘ಆರೋಗ್ಯಕರ ಮರ ಧರೆಗೆ: ಉಪ ಅರಣ್ಯ ಸಂರಕ್ಷಾಧಿಕಾರಿ ವಿರುದ್ಧ ದೂರು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಆಗಸ್ಟ್‌ 19ರಂದು ವರದಿ ಪ್ರಕಟವಾಗಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಸಚಿವರ ಸೂಚನೆಯಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನವೆಂಬರ್‌ 11ರಂದು ಪತ್ರ ಬರೆದಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ, ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿ‌ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.