ADVERTISEMENT

ಕಾನೂನು ಬಾಹಿರ ಪ್ರವೇಶ ನೀಡಿದರೆ ಕ್ರಮ

ಖಾಸಗಿ ವಿ.ವಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 19:39 IST
Last Updated 12 ಜುಲೈ 2018, 19:39 IST
   

ಬೆಂಗಳೂರು: ಖಾಸಗಿ ವಿಶ್ವವಿದ್ಯಾಲಯಗಳು ಕಾನೂನು ಬಾಹಿರವಾಗಿ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದರೆ, ಅಂತಹ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಪ್ರಶ್ನೋತರ ಅವಧಿಯಲ್ಲಿ ಜೆಡಿಎಸ್‌ನ ಎನ್‌.ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಅಲಯನ್ಸ್‌ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಗಳನ್ನು ಬಿಟ್ಟು ಉಳಿದ 13 ಖಾಸಗಿ ವಿಶ್ವವಿದ್ಯಾಲಯಗಳ ಪರಿವೀಕ್ಷಣೆ ನಡೆಸಲು ಉನ್ನತ ಶಿಕ್ಷಣ ಪರಿಷತ್‌ಗೆ ಅವಕಾಶ ನೀಡಲಾಗಿದೆ ಎಂದರು.

ಈಗಾಗಲೇ ಪಿಇಎಸ್‌ ವಿಶ್ವವಿದ್ಯಾಲಯ, ಎಂ.ಎಸ್‌.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ ಮತ್ತು ದಯಾನಂದ ಸಾಗರ್‌ ವಿಶ್ವವಿದ್ಯಾಲಯಗಳ ಪರಿವೀಕ್ಷಣೆಯನ್ನು ನಡೆಸಲಾಗಿದೆ. ಈ ಸಂಬಂಧ ಉನ್ನತ ಶಿಕ್ಷಣ ಪರಿಷತ್ತು ವರದಿ ಸಲ್ಲಿಸಬೇಕಾಗಿದೆ. ಒಂದು ವೇಳೆ ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ADVERTISEMENT

ಒಪ್ಪಿಗೆ ಸಿಕ್ಕಿದರೆ ಭರ್ತಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಪ್ರಾಂಶುಪಾಲರು ಮತ್ತು ಬೋಧಕರ ಹುದ್ದೆಗಳನ್ನುಭರ್ತಿ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕರೆ ತಕ್ಷಣವೇ ಭರ್ತಿ ಮಾಡುವುದಾಗಿ ಜಿ.ಟಿ.ದೇವೇಗೌಡ, ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದರು.

ಅಲ್ಲದೆ, ವಿ.ವಿಗಳಲ್ಲಿ ಖಾಲಿ ಇರುವ ಕುಲಪತಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹತಾ ಪಟ್ಟಿ ಸಿದ್ಧಪಡಿಸಲಾಗಿದೆ. ಶೀಘ್ರ ಭರ್ತಿ ಮಾಡಲಾಗುವುದು ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.