ಈಶ್ವರ ಬಿ. ಖಂಡ್ರೆ
ಬೆಂಗಳೂರು: ಎಚ್‌ಎಂಟಿ ಕಂಪನಿಗೆ ನೀಡಿದ ₹14 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿಯ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಎಚ್‌ಎಂಟಿಗೆ ನೀಡಿದ ಭೂಮಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿಲ್ಲ. ಸುಪ್ರೀಂಕೋರ್ಟ್ ನೀಡಿದ ಹಲವು ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಪ್ರಕಾರ ಇಂದಿಗೂ ಅದು ಅರಣ್ಯವೇ ಆಗಿದೆ. ಆದರೂ, ರಿಯಲ್ ಎಸ್ಟೇಟ್ ಸಂಸ್ಥೆಗಳು ಅಪಾರ್ಟ್‌ಮೆಂಟ್ ಕಟ್ಟಿದ್ದಾರೆ. ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗುತ್ತಿದೆ. ಅಂದಿನ ಅರಣ್ಯ ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಡಿನೋಟಿಫಿಕೇಷನ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ ಎಂದು ದೂರಿದರು.
ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿ ಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ. ಇದು ಸರ್ಕಾರದ ವಿರುದ್ಧ ಮಾಡಿರುವ ಸಂಪೂರ್ಣ ಸುಳ್ಳು ಆರೋಪ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸಿಬಿಐಗೆ ಸುಳ್ಳು ಆರೋಪದ ಪತ್ರ ಬರೆದಿದ್ದಾರೆ. ಇದು ದುರ್ವರ್ತನೆ ಬೆದರಿಕೆಯ ತಂತ್ರ ಎಂದರು.
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಎಚ್‌ಎಂಟಿಗೆ ಭೂಮಿ ಗುತ್ತಿಗೆ ನೀಡಲಾಗಿತ್ತು. ಅದರ ಮಾಲೀಕತ್ವ ಅರಣ್ಯ ಇಲಾಖೆಗೆ ಸೇರಿದ್ದು. ಹೀಗಿದ್ದರೂ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಭಾಗಶಃ ಮಾರಾಟ ಮಾಡಲಾಗಿತ್ತು. ಈ ಅರಣ್ಯ ಭೂಮಿ ಪರಭಾರೆ ಮಾಡದಂತೆ 2015ರಲ್ಲಿ ನಿರ್ಬಂಧ ಹೇರಲಾಗಿತ್ತು. ಎಚ್‌ಎಂಟಿ ಅನಧಿಕೃತ ಅರಣ್ಯ ಭೂಮಿ ಪರಭಾರೆ ಮಾಡಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು.
1980ರ ಪೂರ್ವದಲ್ಲಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಿಗೆ ನೀಡಿರುವ ಅರಣ್ಯ ಭೂಮಿಗಳ ಡಿನೋಟಿಫಿಕೇಷನ್ ಪ್ರಸ್ತಾವವನ್ನು ಸಂಪುಟದ ಮುಂದೆ ಮಂಡಿಸಲು 2020ರ ಜುಲೈ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೂ, ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ನೀವು ನಿಯಮ ಉಲ್ಲಂಘಿಸಿ ಈ ಅರಣ್ಯ ಜಮೀನನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದೀರಿ. ಅರಣ್ಯ ಪರಿಸರಕ್ಕೆ ಘೋರ ಅನ್ಯಾಯ ಎಸಗಿರುವ ನೀವು ನೋಟಿಸ್‌ಗೆ ಏಳು ದಿನಗಳಲ್ಲಿ ಉತ್ತರ ನೀಡಬೇಕು’ ಎಂದು ಅರಣ್ಯ ಇಲಾಖೆ ಸೂಚಿಸಿತ್ತು. ಇವರ ಜತೆಗೆ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಸಂದೀಪ್ ದವೆ, ನಿವೃತ್ತ ಪಿಸಿಸಿಎಫ್ ವಿಜಯಕುಮಾರ್ ಗೋಗಿ, ಎಪಿಸಿಸಿಎಫ್ ಸ್ಮಿತಾ ಬಿಜ್ಜೂರ್ ಅವರಿಗೂ ನೋಟಿಸ್ ನೀಡಲಾಗಿತ್ತು.
ಬೆಂಗಳೂರು ಉತ್ತರ ತಾಲ್ಲೂಕಿನ ಪೀಣ್ಯ ಪ್ಲಾಂಟೇಷನ್ ನಲ್ಲಿರುವ 443 ಎಕರೆ ಜಾಗದ ಮಾರುಕಟ್ಟೆ ಮೌಲ್ಯ ₹14 ಸಾವಿರ ಕೋಟಿ ಎಂಬುದು ಅರಣ್ಯ ಇಲಾಖೆಯ ವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.