ADVERTISEMENT

ಕೋವಿಡ್‌ ನಿಯಮ ಉಲ್ಲಂಘಿಸಿದರೆ ತಾರತಮ್ಯವಿಲ್ಲದೇ ಕ್ರಮ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 14:02 IST
Last Updated 10 ಜನವರಿ 2022, 14:02 IST
   

ಬೆಂಗಳೂರು: ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಯಾವುದೇ ರೀತಿಯ ತಾರತಮ್ಯವಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೇಕೆದಾಟು ಯೋಜನೆ ಅನುಷ್ಢಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸುವ ಸಾಮಾನ್ಯ ಜನ ಮತ್ತು ದೊಡ್ಡ ನಾಯಕರ ವಿರುದ್ಧ ಒಂದೇ ರೀತಿಯ ಕ್ರಮ ಜರುಗಿಸಲಾಗುವುದು. ಪಾದಯಾತ್ರೆಯ ಸಂಘಟಕರು ಮತ್ತು ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಪೊಲೀಸರು ನಿಯಮಾನುಸಾರ ಕ್ರಮ ಜರುಗಿಸಿದ್ದಾರೆ’ ಎಂದರು.

ಪಾದಯಾತ್ರೆಯಲ್ಲಿ ಭಾವಹಿಸುತ್ತಿರುವವರ ಆರೋಗ್ಯದ ಕುರಿತು ಸರ್ಕಾರಕ್ಕೆ ಚಿಂತೆ ಇದೆ. ಸುದೀರ್ಘವಾಗಿ ನಡೆದು ಬರುವವರ ಆರೋಗ್ಯ ತಪಾಸಣೆ ನಡೆಸುವುದು ಸರ್ಕಾರದ ಕರ್ತವ್ಯ. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವವರು ಆರೋಗ್ಯ ತಪಾಸಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಮತ್ತಷ್ಟು ಕ್ರಮ ಅಗತ್ಯ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೋವಿಡ್‌ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಭಾನುವಾರ ರಾಜ್ಯದಲ್ಲಿ 12,000 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 9,000 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇಕಡ 6.8ರಷ್ಟಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇ 10 ತಲುಪಿದೆ. ಕೋವಿಡ್‌ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಕೋವಿಡ್‌ ನಿಯಂತ್ರಿಸಲು ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.