ಡಾ. ಅಂಬೇಡ್ಕರ್
ಬೆಂಗಳೂರು: ಕರೆನ್ಸಿ ನೋಟುಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಚಿತ್ರವನ್ನೂ ಮುದ್ರಿಸಿ ಎಂದು ರಾಮ ಮನೋಹರ್ ಲೋಹಿಯಾ ವಿಚಾರ ವೇದಿಕೆಯು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬರೆದಿರುವ ಪತ್ರದಲ್ಲಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಬಂಜಗೆರೆ ಜಯಪ್ರಕಾಶ, ವೇದಿಕೆಯ ಸಂಚಾಲಕ ಬಿ.ಎಸ್. ಶಿವಣ್ಣ ಸೇರಿ ಹಲವರು ಸಹಿ ಮಾಡಿದ್ದಾರೆ.
‘ಸಂವಿಧಾನ ಬದ್ಧ ರಕ್ಷಣೆಯ ಹೊರತಾಗಿಯೂ ದೇಶದಲ್ಲಿ ಅಸ್ಪೃಶ್ಯತೆ, ಜಾತಿ ಆಧಾರಿತ ತಾರತಮ್ಯ ಇನ್ನೂ ಜೀವಂತವಾಗಿದೆ. ಇವುಗಳನ್ನು ನಿಷೇಧಿಸುವ ಸಾಮಾಜಿಕ ನ್ಯಾಯ ತತ್ವದ ಸಂಕೇತವಾಗಿ ಅಂಬೇಡ್ಕರ್ ಅವರ ಚಿತ್ರವನ್ನೂ ಕರೆನ್ಸಿ ನೋಟುಗಳಲ್ಲಿ ಮುದ್ರಿಸಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.
‘ಜನರು ದಿನವೂ ಬಳಸುವ ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಅವರ ಚಿತ್ರವಿದ್ದರೆ ಸಾಮಾಜಿಕ ನ್ಯಾಯ, ಸಂವಿಧಾನ ನೀಡಿರುವ ಹಕ್ಕುಗಳು ಮೊದಲಾದವುಗಳು, ಜನರಿಗೆ ಪದೇ–ಪದೇ ಮನದಟ್ಟಾಗುತ್ತಿರುತ್ತದೆ. ಅಂಬೇಡ್ಕರ್ ಅವರ ಚಿತ್ರ ಬಳಸುವುದರಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಘನತೆಗೆ ಧಕ್ಕೆಯಾಗುವುದಿಲ್ಲ’ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.