ADVERTISEMENT

ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ಜಾಲಿರೈಡ್ ಶಂಕೆ

* ಜಾಗ್ವಾರ್‌ನಲ್ಲಿ ಕಂಬಕ್ಕೆ ಡಿಕ್ಕಿ; ಬೆನ್ಜ್‌ನಲ್ಲಿ ಆಸ್ಪತ್ರೆಗೆ ರವಾನೆ * ನಟಿ, ಸ್ನೇಹಿತನಿಗೂ ಗಾಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 0:15 IST
Last Updated 5 ಏಪ್ರಿಲ್ 2020, 0:15 IST
ಜಖಂಗೊಂಡ ಕಾರು
ಜಖಂಗೊಂಡ ಕಾರು   

ಬೆಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ಕನ್ನಡದ ನಟಿ ಶರ್ಮಿಳಾ ಮಾಂಡ್ರೆ (33) ಹಾಗೂ ಅವರ ಸ್ನೇಹಿತ ಕೆ. ಲೋಕೇಶ್ ವಸಂತ್ (35) ಎಂಬುವರು ಪ್ರಯಾಣಿಸುತ್ತಿದ್ದರು ಎನ್ನಲಾದ ಜಾಗ್ವಾರ್‌ ಕಾರು, ವಸಂತನಗರದ ಕೆಳಸೇತುವೆಯಲ್ಲಿ ಅಪಘಾತಕ್ಕೀಡಾಗಿದೆ. ಶರ್ಮಿಳಾ ತಲೆಗೆ ಪೆಟ್ಟು ಬಿದ್ದಿದ್ದು, ಸ್ನೇಹಿತನ ಕೈ ಮುರಿದಿದೆ.

‘ಶನಿವಾರ ನಸುಕಿನ 3ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಶರ್ಮಿಳಾ ಹಾಗೂ ಲೋಕೇಶ್ ಅವರುಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಗ್ವಾರ್ ಕಾರನ್ನು ಜಪ್ತಿ ಮಾಡಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಗೊತ್ತಾಗಿಲ್ಲ. ವಸಂತನಗರದ ಕೆಳಸೇತುವೆಯಲ್ಲಿ ತಿರುವು ತೆಗೆದುಕೊಳ್ಳುವಾಗ ರಸ್ತೆ ಮಧ್ಯದ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡು ಒಂದು ಚಕ್ರ ಕಿತ್ತುಹೋಗಿದೆ’ ಎಂದರು.

ADVERTISEMENT

‘ಶರ್ಮಿಳಾ ಇದ್ದ ಕಾರಿನ ಹಿಂದೆಯೇ ಅವರ ಸ್ನೇಹಿತರ ಎರಡು ಕಾರುಗಳು ಬರುತ್ತಿದ್ದವು. ಬೆನ್ಜ್‌ ಕಾರಿನಲ್ಲಿದ್ದ ಸ್ನೇಹಿತರು, ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಶರ್ಮಿಳಾ ಹಾಗೂ ಅವರ ಸ್ನೇಹಿತನನ್ನು ತಮ್ಮಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಪಾರ್ಟಿ ಮುಗಿಸಿ ಜಾಲಿರೈಡ್?: ‘ಎಲ್ಲೋ ಶುಕ್ರವಾರ ರಾತ್ರಿ ಪಾರ್ಟಿ ಮಾಡಿದ್ದ ಶರ್ಮಿಳಾ ಹಾಗೂ ಸ್ನೇಹಿತರು, ಅದಾದ ನಂತರ ಎರಡು ಜಾಗ್ವಾರ್ ಹಾಗೂ ಬೆನ್ಜ್ ಕಾರಿನಲ್ಲಿ ಜಾಲಿ ರೈಡ್ ಹೊರಟಿದ್ದರು. ಪ್ರತಿ ಕಾರಿನಲ್ಲೂ ಒಬ್ಬ ಯುವತಿ–ಯುವಕ ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

‘ಕಾರು ತೆರವು ಮಾಡಲು ಹೋದಾಗಲೂ ಉದ್ಯಮಿಯೊಬ್ಬರ ಮಗ ಸ್ಥಳದಲ್ಲಿದ್ದ. ಆತನ ಜೊತೆ ಯುವತಿಯೂ ಇದ್ದಳು. ತಾವು ಶರ್ಮಿಳಾ ಸ್ನೇಹಿತರೆಂದು ಅವರೇ ಹೇಳಿಕೊಂಡರು. ಅವರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದರು.

‘ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಅನುಮಾನವಿದೆ. ಗಾಯಾಳುಗಳ ವೈದ್ಯಕೀಯ ವರದಿಯಿಂದಲೇ ನಿಜಾಂಶ ಗೊತ್ತಾಗಬೇಕಿದೆ.’

’ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನು ಉಲ್ಲಂಘಿಸಿ ಶರ್ಮಿಳಾ ಹಾಗೂ ಸ್ನೇಹಿತರು, ಖಾಲಿ ರಸ್ತೆಯಲ್ಲಿ ಜಾಲಿರೈಡ್ ಮಾಡಿದ್ದಾರೆ. ಅಪಘಾತ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಥಾಮಸ್ ಅವರ ಕಾರು: ‘ಅಪಘಾತಕ್ಕೀಡಾದ ಕಾರು (ಕೆಎ 51 ಎಂಜೆ 2481) ಥಾಮಸ್ ಅವರದ್ದು. ತಮ್ಮ ಕಾರನ್ನು ಅವರೇ ನಟಿ ಶರ್ಮಿಳಾ ಅವರಿಗೆ ಕೊಟ್ಟಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿಗೆ ‘ಕೆಎಸ್‌ಪಿ ಕ್ಲಿಯರ್ ಪಾಸ್’ !

‘ಅಪಘಾತವಾದ ಕಾರಿಗೆ ‘ಕೆಎಸ್‌ಪಿ (ಕರ್ನಾಟಕ ರಾಜ್ಯ ಪೊಲೀಸ್) ಕ್ಲಿಯರ್ ಪಾಸ್‌’ ಅಂಟಿಸಲಾಗಿತ್ತು. ಇದು ವಿಪತ್ತು ನಿರ್ವಹಣೆ ಕಾಯ್ದೆ–2005ರ ಉಲ್ಲಂಘನೆ. ಹೈಗ್ರೌಂಡ್ಸ್ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದ ವಿಶೇಷ ತಂಡದಿಂದ ತನಿಖೆ ಮುಂದುವರಿದಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹೇಳಿದರು.

ವೈದ್ಯರಿಗೆ ಸುಳ್ಳು ಹೇಳಿದ್ರಾ ನಟಿ?

‘ಆರಂಭದಲ್ಲಿ ಗಾಯಾಳುಗಳನ್ನು ವಿಕ್ರಮ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗಾಯಕ್ಕೆ ಕಾರಣವೇನು ಎಂದು ವೈದ್ಯರು ಕೇಳಿದ್ದರು. ಶರ್ಮಿಳಾ ಹಾಗೂ ಅವರ ಸ್ನೇಹಿತ, ‘ಜಯನಗರದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆಯಿತು’ ಎಂದು ಸುಳ್ಳು ಹೇಳಿದ್ದರು. ಜೆ.ಪಿ.ನಗರದಲ್ಲಿ ಅಪಘಾತವಾದರೆ ನಮ್ಮ ಆಸ್ಪತ್ರೆಗೆ ಏಕೆ ಬಂದರೆಂದು ಅನುಮಾನಗೊಂಡ ವೈದ್ಯರು, ಹೈಗ್ರೌಂಡ್ಸ್ ಸಂಚಾರ ಠಾಣೆಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲೇ ವಸಂತನಗರದ ಕೆಳಸೇತುವೆಯಲ್ಲಿ ಕಾರೊಂದು ಅಪಘಾತವಾದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದು ಶರ್ಮಿಳಾ ಪ್ರಯಾಣಿಸುತ್ತಿದ್ದ ಕಾರು ಎಂಬುದು ಖಾತ್ರಿಯಾಯಿತು’ ಎಂದರು.

‘ತೀವ್ರ ಪೆಟ್ಟು ಬಿದ್ದಿದ್ದರಿಂದ ಶರ್ಮಿಳಾ ಹಾಗೂ ಸ್ನೇಹಿತ ಸದ್ಯಕ್ಕೆ ಯಾವುದೇ ಹೇಳಿಕೆ ನೀಡಿಲ್ಲ. ಈ ಅಪಘಾತದಲ್ಲಿ ಸಾಕಷ್ಟು ಅನುಮಾನಗಳು ಇದ್ದು, ತನಿಖೆ ಮುಂದುವರಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.