ADVERTISEMENT

ಮೈಸೂರಿನಲ್ಲಿಯೇ ವಿಷ್ಣು ಸ್ಮಾರಕ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 17:40 IST
Last Updated 2 ಡಿಸೆಂಬರ್ 2018, 17:40 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ/ಹುಬ್ಬಳ್ಳಿ: ‘ನಟ ವಿಷ್ಣುವರ್ಧನ್ ಸ್ಮಾರಕವನ್ನು ಮೈಸೂರಿನಲ್ಲಿಯೇ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ನೀಲಗುಂದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಭಾರತಿ ವಿಷ್ಣುವರ್ಧನ್ ಒಲವು ತೋರಿದ್ದಾರೆ. ಈಗಾಗಲೇ ಮೈಸೂರು ಸಮೀಪ ಜಾಗ ಗುರುತಿಸಲಾಗಿದೆ. ಜಾಗದ ವಿಚಾರ ಸದ್ಯಕ್ಕೆ ನ್ಯಾಯಾಲಯದಲ್ಲಿದೆ. ಹೀಗಾಗಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಗೊಡ್ಡು ಬೆದರಿಕೆಗೆ ಹೆದರೋದಿಲ್ಲ: ಚಳಿಗಾಲದ ಅಧಿವೇಶನದ ವೇಳೆ ಸದನದ ಒಳಗೂ, ಹೊರಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ತಿರುಗೇಟು ನೀಡಿದ ಅವರು, ‘ಇಂತಹ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ. ಅವರು (ಬಿಜೆಪಿಯವರು) ಒಂದು ಲಕ್ಷ ಜನ ಸೇರಿಸಿದರೆ, ನಾವು (ಕಾಂಗ್ರೆಸ್–ಜೆಡಿಎಸ್) ಎರಡು ಲಕ್ಷ ಜನರನ್ನು ಸೇರಿಸುತ್ತೇವೆ. ರೈತರು ಅವರ ಪರ ಮಾತ್ರ ಇದ್ದಾರಾ? ನಮ್ಮ ಪರವಾಗಿಯೂ ಇದ್ದಾರೆ. ರಾಜಕೀಯವಾಗಿ ನೀಡುವ ಇಂತಹ ಹೇಳಿಕೆಗಳಿಗೆ ಕಿಮ್ಮತ್ತಿಲ್ಲ’ ಎಂದರು.

ADVERTISEMENT

**

ಸಮಸ್ಯೆ ಜೀವಂತವಾಗಿಟ್ಟು ರಾಜಕೀಯ

ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ರಾಮ ನೆನಪಾಗುತ್ತಾನೆ. ಕಳೆದ ನಾಲ್ಕೂವರೆ ವರ್ಷಗಳಿಂದ ಯಾಕೆ ನೆನಪಾಗಲಿಲ್ಲ? ಪ್ರಧಾನಿ ನರೇಂದ್ರ ಮೋದಿ ಇದನ್ಯಾಕೆ ಮಾಡಲಿಲ್ಲ? ಎಂದು ಸಿದ್ದರಾಮಯ್ಯ ಅವರು ಹರಿಹಾಯ್ದರು

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಮ ಮಂದಿರ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದೆ. ಅವರಿಗೆ (ಬಿಜೆಪಿಯವರು) ರಾಮಮಂದಿರ ನಿರ್ಮಾಣ ಸಮಸ್ಯೆ ಬಗೆಹರಿಯಬಾರದು; ಜೀವಂತವಾಗಿರಬೇಕು. ಅದೊಂದು ರಾಜಕೀಯ ನಾಟಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.