ADVERTISEMENT

ರಸ್ತೆ ನಿರ್ಮಿಸುವ ವಿಚಾರ: ನಟ ಯಶ್ ಪೋಷಕರೊಂದಿಗೆ ಗ್ರಾಮಸ್ಥರ ವಾಗ್ವಾದ

ಜಮೀನಿನ ಸರ್ವೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 20:51 IST
Last Updated 9 ಮಾರ್ಚ್ 2021, 20:51 IST
ದುದ್ದ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿ ಹೊರ ಬಂದ ನಟ ಯಶ್‌
ದುದ್ದ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿ ಹೊರ ಬಂದ ನಟ ಯಶ್‌   

ಹಾಸನ: ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ, ತಾಲ್ಲೂಕಿನ ದುದ್ದ ಹೋಬಳಿಯ ತಿಮ್ಲಾಪುರ ಗ್ರಾಮದ ಬಳಿ ಚಿತ್ರನಟ ಯಶ್‌ ಅವರ ತಂದೆ–ತಾಯಿ ಹಾಗೂ ಗ್ರಾಮಸ್ಥರ ನಡುವೆ ಮಂಗಳವಾರ ಗಲಾಟೆ ನಡೆದಿದೆ.

ಯಶ್‌, ತಿಮ್ಲಾಪುರ ಬಳಿ 70 ಎಕರೆ ಜಮೀನು ಖರೀದಿಸಿದ್ದಾರೆ. ಅವರ ತಂದೆ ಅರುಣ್‌ ಕುಮಾರ್‌ ಹಾಗೂ ತಾಯಿ ಪುಷ್ಪಾ ಅವರು ಜಮೀನಿನ ಬಳಿ ಜೆಸಿಬಿಯೊಂದಿಗೆ ಕೆಲಸಮಾಡಿಸುತ್ತಿದ್ದಾಗ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ.

ಜಮೀನಿಗೆ ಓಡಾಡುವ ಕಾಲು ದಾರಿ ಜಾಗಕ್ಕಾಗಿ ರಮೇಶ್‌ ಎಂಬ ಸ್ಥಳೀಯರೊಬ್ಬರೊಂದಿಗೆ ವಾಗ್ವಾದ ಶುರುವಾಗಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಂತರ ಗ್ರಾಮಸ್ಥರೆಲ್ಲರೂ ಗಲಾಟೆಮಾಡಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ದುದ್ದ ಠಾಣೆ ಪೊಲೀಸರು, ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು. ಯಶ್‌, ಸಂಜೆ ಠಾಣೆಗೆ ಭೇಟಿ ನೀಡಿದ್ದು, ಡಿವೈಎಸ್‌ಪಿ ಪುಟ್ಟಸ್ವಾಮಿ ಗೌಡಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿದರು. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಹಾಗೂ ತಹಶೀಲ್ದಾರ್‌ರಿಂದ ಸರ್ವೆ ಮಾಡಿಸುವಂತೆ ಸೂಚಿಸಿದರು.

‘ಈಗಾಗಲೇ ಮೂರು ದಾರಿ ಬಿಟ್ಟುಕೊಡಲಾಗಿದೆ. ಮತ್ತೊಂದು ದಾರಿ ಬಿಡುವಂತೆಕೇಳುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ಎಂದು ರಮೇಶ್‌ ಹೇಳಿದರು.

‘ನಕ್ಷೆ ಪ್ರಕಾರ, ಮತ್ತೊಂದು ದಾರಿ ಬಿಡಬೇಕು. ಅದಕ್ಕಾಗಿ ಕಾಲು ದಾರಿನಿರ್ಮಿಸಲಾಗುತ್ತಿದೆ’ ಎಂದು ಯಶ್‌ ಬೆಂಬಲಿಗರು ತಿಳಿಸಿದರು.

ಯಶ್‌ ವಾಪಸ್ಸಾಗುವಾಗ ಪರ, ವಿರುದ್ಧ ಘೋಷಣೆಗಳು ಕೇಳಿಬಂದವು.

ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು: ಯಶ್‌
ಹಾಸನ:
‘ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ತಂದೆ, ತಾಯಿಯನ್ನು ನಿಂದಿಸಿದರೂ ನನ್ನ ಇಮೇಜ್‌ ನೋಡಿಕೊಂಡು ಸುಮ್ಮನೆ ಇರಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿ ಬೆಳೆದವನು. ನಾನು ಎಲ್ಲೆ ಬೇಕಾದರೂ ಜಮೀನು ಮಾಡ್ತೀನಿ’ ಎಂದು ನಟ ಯಶ್‌ ಹೇಳಿದರು.

‘ಜಮೀನಿಗೆ ಕಾಂಪೌಂಡ್‌ ಹಾಕಿಸುತ್ತಿರುವುದು ಸಮಸ್ಯೆ ಅಲ್ಲ. ಆದರೆಜಮೀನು ಬಳಿ ವಾಹನ ನಿಲ್ಲಿಸಿ, ಕುಡಿದು, ಇಸ್ಪೀಟು ಆಟವಾಡುತ್ತಿದ್ದರೆ ನೋಡಿಕೊಂಡು ಇರಲು ಆಗುವುದಿಲ್ಲ. ನಮ್ಮ ಜತೆ ಕೆಲಸ ಮಾಡುವವರ ಮೇಲೆ ಕೈ ಮಾಡಿದರೆ ಸುಮ್ಮನೆ ಇರಲು ಆಗುವುದಿಲ್ಲ. ನಮ್ಮ ಜಮೀನಿನಿಂದ ಕಾಲಭೈರವೇಶ್ವರ ದೇವಸ್ಥಾನಕ್ಕೆ ಹೋಗಲು ಗ್ರಾಮಸ್ಥರೇ ರಸ್ತೆ ಕೇಳಿದ್ದಾರೆ. ದೇವಸ್ಥಾನಕ್ಕೆ ಹೋಗುವ ರಸ್ತೆ ಆಗಿರುವುದರಿಂದ ಅದು ನಮಗೆ ಬೇಕಾಗಿಯೂ ಇಲ್ಲ. ಆದರೆ, ವಿಷಯ ಅದಲ್ಲ. ದುಡ್ಡು ಮಾಡಲು ಇಲ್ಲಿ ಜಮೀನು ಮಾಡಿಲ್ಲ. ಕೃಷಿ ಉದ್ದೇಶಕ್ಕಾಗಿ ಜಮೀನು ಖರೀದಿಸಿದ್ದೇನೆ. ಸರ್ಕಾರಿ ಶಾಲೆ ಅಥವಾ ಬಡವರಿಗೆ ಉಪಯೋಗವಾಗುತ್ತದೆ ಎನ್ನುವುದಾದರೆ ಹತ್ತು ಎಕರೆ ಜಮೀನು ಬಿಟ್ಟು ಕೊಡಲು ಸಿದ್ಧ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.