ADVERTISEMENT

ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ತಡ ಆಗಬಹುದು: ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 14:41 IST
Last Updated 25 ಜುಲೈ 2023, 14:41 IST
ಸಚಿವ ಕೆ.ಎಚ್‌. ಮುನಿಯಪ್ಪ
ಸಚಿವ ಕೆ.ಎಚ್‌. ಮುನಿಯಪ್ಪ   

ಬೆಂಗಳೂರು: ‘ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ಇನ್ನೂ ಕೆಲವು ತಿಂಗಳು ತಡ ಆಗಬಹುದು’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಎಲ್ಲ ಫಲಾನುಭವಿಗಳಿಗೆ ತಲಾ 5 ಕೆ.ಜಿ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಒಂದು ಕೋಟಿ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ’ ಎಂದರು.

‘ಕೆಲವರು ಇನ್ನೂ ಪಡಿತರಚೀಟಿ ಮಾಡಿಸಿಕೊಂಡಿಲ್ಲ. ಕೆಲವು ಕುಟುಂಬಗಳಲ್ಲಿ ಮನೆಯ ಒಡೆಯ ತೀರಿಕೊಂಡು ಹಲವು ವರ್ಷಗಳಾಗಿವೆ. ಹೀಗಾಗಿ ಸಮೀಕ್ಷೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮನೆಯ ಒಡೆಯ ನಿಧನರಾಗಿರುವ ಕುಟುಂಬಗಳು ಹೊಂದಿರುವ ಕಾರ್ಡ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ’ ಎಂದರು.

ADVERTISEMENT

ಎಲ್ಲರೂ ಒಗ್ಗಟ್ಟಾಗಿದ್ದೇವೆ: ‘ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾಗಿದೆ. ಅಷ್ಟರಲ್ಲಿಯೇ ಸರ್ಕಾರ ಉರುಳಿಸಲು ಯಾರು ಪ್ರಯತ್ನಿಸುತ್ತಾರೆ? ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದರು.

ಸರಿ ಮಾಡಿಕೊಳ್ಳುತ್ತೇವೆ: ‘ಬಿ.ಕೆ. ಹರಿಪ್ರಸಾದ್ ಅವರು ನಿಷ್ಠೆ ಮತ್ತು ಶಿಸ್ತಿನ ಮನುಷ್ಯ. ಅತ್ಯಂತ ಹಿರಿಯರು. ಕೆಲವೊಂದು ರಾಜಕೀಯ ಕಾರಣಗಳಿಗೆ ಅವರಿಗೆ ನೋವಾಗಿದೆ. ಮಂತ್ರಿ ಆಗಿಲ್ಲ ಎನ್ನುವುದೊಂದೇ ದೊಡ್ಡದಲ್ಲ. ಸಣ್ಣಪುಟ್ಟ ಏರುಪೇರುಗಳನ್ನು ನಾವು ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತೇವೆ. ಅವರ ಅನುಭವ, ಸೇವೆ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಾವು, ಹೈಕಮಾಂಡ್ ತೀರ್ಮಾನ ಮಾಡುತ್ತೇವೆ’ ಎಂದರು.

ಸ್ವಾಗತಾರ್ಹ: ‘ಬಿಜೆಪಿ– ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದು. ಜೆಡಿಎಸ್ ಪಕ್ಷದ ನಿಲುವಿನ ಬಗ್ಗೆ ನಾನು ಮಾತನಾಡುವುದಿಲ್ಲ. ಎನ್‌ಡಿ‌ಎ- ‘ಇಂಡಿಯಾ’ ಮೈತ್ರಿಕೂಟದಿಂದ ದೂರ ಉಳಿಯುವ ದೇವೇಗೌಡರ ನಿರ್ಧಾರ ಸ್ವಾಗತಾರ್ಹ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.