ADVERTISEMENT

ಸಿ.ಎಂ ಭರವಸೆ: ಸಾರಿಗೆ ಮುಷ್ಕರ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೌಕರರ ಸಮಸ್ಯೆಗಳ ಬಗ್ಗೆ ಸಂಘಟನೆಗಳೊಂದಿಗೆ ಸಂಕ್ರಾಂತಿ ಬಳಿಕ ಸಭೆ ನಡೆಸುವುದಾಗಿ ಭರವಸೆ ನೀಡಿದ ಕಾರಣ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.31ರಂದು ನಡೆಸಲು ಉದ್ದೇಶಿಸಿದ ಮುಷ್ಕರವನ್ನು ಹಿಂದಕ್ಕೆ ಪಡೆದಿದೆ.

ADVERTISEMENT

2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿತ್ತು. 2023ರ ಫೆಬ್ರುವರಿ 28ರವರೆಗೆ ಪರಿಷ್ಕರಣೆಯ ಹಿಂಬಾಕಿಯನ್ನು ಆಗಿನ ಸರ್ಕಾರ ನೀಡಿಲ್ಲ. ನೌಕರರ ಮತ್ತು ಈ ಸಮಯದಲ್ಲಿ ನಿವೃತ್ತರಾದವರಿಗೆ ನೀಡಬೇಕಾದ ಹಿಂಬಾಕಿ ₹ 1,785 ಕೋಟಿಯಾಗಿದ್ದು, ಅದನ್ನು ‍ಕೂಡಲೇ ಪಾವತಿಸಬೇಕು 2024ರ ಜನವರಿ 1ರಿಂದ ಅನ್ವಯವಾಗುವಂತೆ ಮತ್ತೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು.

ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರ ನಿವಾಸ ‘ಕಾವೇರಿ’ಯಲ್ಲಿ ಭಾನುವಾರ ರಾತ್ರಿ ಸಭೆ ಕರೆದಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

‘ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ನೀಡಬೇಕಿದ್ದ ಬಾಕಿ ಉಪಧನ, ಗಳಿಕೆ ನಗದೀಕರಣ ಮೊತ್ತ ₹ 224 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ₹ 5,900 ಕೋಟಿ ನಷ್ಟ ಉಂಟಾಗಿತ್ತು. ಅದನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಸಂಘಟನೆಗಳೊಂದಿಗೆ ಅನೇಕ ಸಲ ನಾನು ಚರ್ಚೆ ಮಾಡಿದ್ದೆ. ಇಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ₹ 2000 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ತಯಾರಿದ್ದಾರೆ. ಫೆಬ್ರುವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಬೇಡಿಕೆಗಳನ್ನು ಸೇರಿಸಲಾಗುವುದು. ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ ಹಣ ಬಿಡುಗಡೆಯಾಗಲಿದೆ’ ಎಂದು ರಾಮಲಿಂಗಾರೆಡ್ಡಿ ಸಭೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.

‘ಸಾರಿಗೆ ನಿಗಮಗಳ ನೌಕರರ ಸಮಸ್ಯೆ ಆಲಿಸಲು ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಸಭೆ ನಡೆಸುವುದಾಗಿ ಲಿಖಿತವಾಗಿ ತಿಳಿಸಿರುವುದರಿಂದ ಮುಷ್ಕರವನ್ನು ಮುಂದೂಡಲಾಗಿದೆ’ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.