ADVERTISEMENT

ಅಂಗೈಯಲ್ಲಿ ಕಂದಾಯ ಆಡಳಿತ ಚರಿತ್ರೆ: ಕೃತಿರೂಪದಲ್ಲಿ ಹೊರಬಂದಿರುವ ಸಮಗ್ರ ಒಳನೋಟ

ಸಂಧ್ಯಾ ಹೆಗಡೆ
Published 22 ಮಾರ್ಚ್ 2022, 19:31 IST
Last Updated 22 ಮಾರ್ಚ್ 2022, 19:31 IST
‘ದಿ ಅಡ್ವೆಂಟ್ ಆಫ್ ಡಿಜಿಟಲ್ ಗವರ್ನನ್ಸ್’ ಕೃತಿ
‘ದಿ ಅಡ್ವೆಂಟ್ ಆಫ್ ಡಿಜಿಟಲ್ ಗವರ್ನನ್ಸ್’ ಕೃತಿ   

ಮಂಗಳೂರು: ಸರ್ಕಾರಿ ವ್ಯವಸ್ಥೆಯಲ್ಲಿ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ಕಲೆ ಹಾಕಲು ಇನ್ನು ತಡಕಾಡಬೇಕಾಗಿಲ್ಲ. ಕಂದಾಯ ಇಲಾಖೆಯ ಡಿಜಿಟಲ್ ಆಡಳಿತದ ಸಮಗ್ರ ಚಿತ್ರಣವನ್ನು ಐಎಎಸ್ ಅಧಿಕಾರಿಯೊಬ್ಬರು ಅಕ್ಷರ
ರೂಪಕ್ಕಿಳಿಸಿದ್ದಾರೆ.

ಮಂಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ‘ದಿ ಅಡ್ವೆಂಟ್ ಆಫ್ ಡಿಜಿಟಲ್ ಗವರ್ನನ್ಸ್: ಇಂಪ್ಲಿಕೇಷನ್ಸ್ ಫಾರ್ ರೆಸ್ಪಾನ್ಸಿವ್ ರೆವಿನ್ಯೂ ಎಡ್ಮಿನಿಷ್ಟ್ರೇಷನ್ ಆಫ್ ಕರ್ನಾಟಕ’ ಪುಸ್ತಕ ರಚಿಸಿದ್ದಾರೆ. 460 ಪುಟಗಳ ಈ ಕೃತಿಯಲ್ಲಿ ಕಂದಾಯ ಇಲಾಖೆಯ ಐತಿಹಾಸಿಕ ನೋಟ, ಸಾಂಸ್ಥಿಕ ರೂಪುರೇಷೆ, ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗಿನ ಅಧಿಕಾರಿಗಳ ಹೊಣೆಗಾರಿಕೆ, ಇ– ಆಡಳಿತ ಬಂದಮೇಲೆ ಆಗಿರುವ ಕ್ರಾಂತಿಕಾರಿ ಬದಲಾವಣೆಗಳು, ಇಲಾಖೆಯ 25ಕ್ಕೂ ಹೆಚ್ಚು ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಯೋಜನೆಗಳು, ಇವುಗಳ ಫಲಿತಾಂಶದ ಜತೆಗೆ ಸಾರ್ವಜನಿಕರು ಮತ್ತು ಅನುಷ್ಠಾನಾಧಿಕಾರಿಗಳ ಅಭಿಪ್ರಾಯ ದಾಖಲಾಗಿದೆ.

‘ನನ್ನ ಪಿಎಚ್‌.ಡಿ ಅಧ್ಯಯನಕ್ಕೆ ಕೆಲವು ಅಂಕಿ–ಅಂಶ ಕಲೆಹಾಕಲು ಹುಡುಕಾಟ ಮಾಡಬೇಕಾದ ಸಂದರ್ಭ ಬಂತು. ಆಗ ಮೂಡಿದ ಒತ್ತಾಸೆ ಹಾಗೂ 13 ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಈಗ ಕೃತಿ ರೂಪದಲ್ಲಿ ಹೊರಬಂದಿದೆ ಕಂದಾಯ ಇಲಾಖೆಯ ಎಲ್ಲ ಹರವುಗಳನ್ನು ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ಡಾ. ಕುಮಾರ್ ಹೇಳಿದರು.

ADVERTISEMENT

ಕೆಲವು ಯೋಜನೆ ಅನುಷ್ಠಾನದಲ್ಲಿ ಎದುರಾದ ತೊಡಕುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಫಲಾನುಭವಿ ಸಾರ್ವಜನಿಕರ ಅಭಿಪ್ರಾಯವನ್ನು ವಿವರವಾಗಿ ವಿಶ್ಲೇಷಿಸಿ, ಸಮಸ್ಯೆ ಪರಿಹಾರಕ್ಕೆ ಪುಸ್ತಕದ ಕೊನೆಯ ಪುಟಗಳಲ್ಲಿ ಸಲಹೆಗಳನ್ನು ಸೂಚಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

*
ಸದ್ಯ ಇಂಗ್ಲಿಷ್‌ನಲ್ಲಿ ಮುದ್ರಿತವಾಗಿರುವ ಈ ಕೃತಿಯನ್ನು ಕನ್ನಡ ಅವತರಣಿಕೆಯಲ್ಲಿ ಹೊರತರಲು ಸಿದ್ಧತೆಗಳು ನಡೆಯುತ್ತಿವೆ.
–ಡಾ. ಕುಮಾರ್, ಕೃತಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.