ಬೆಂಗಳೂರು: ‘ಪ್ರಾಚೀನ ಪುರುಷರ ಕೂಡು ತಾಣಗಳಂತಾಗಿರುವ ವಕೀಲರ ಸಂಘಗಳು ಮಹಿಳೆಯರ ವ್ಯಾಪಕ ಪಾಲುದಾರಿಕೆಗೆ ದಾರಿ ಮಾಡಿಕೊಡಬೇಕು. ಈ ಸಂಘಗಳನ್ನು ಇನ್ನು ಮುಂದೆಯೂ ಬಾಯ್ಸ್ ಕ್ಲಬ್ ಆಗಿ ಮುಂದುವರಿಯಲು ಬಿಡುವುದಿಲ್ಲ’ ಎಂದು ಮಾರ್ಮಿಕವಾಗಿ ಕುಟುಕಿರುವ ಹೈಕೋರ್ಟ್, ತುಮಕೂರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಏಪ್ರಿಲ್ 5ರಂದು ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿದೆ.
‘ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 33ರಷ್ಟು ಮೀಸಲು ಕಲ್ಪಿಸಲು ವಕೀಲರ ಸಂಘಕ್ಕೆ ಆದೇಶಿಸಬೇಕು’ ಎಂದು ಕೋರಿ ತುಮಕೂರಿನ ವಕೀಲೆ ಕೆ.ಆರ್.ಮೋಹನ ಕುಮಾರಿ ಸೇರಿದಂತೆ ಎಂಟು ಮಹಿಳಾ ವಕೀಲರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ನಾಲ್ವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ಕೆ.ಎಸ್.ವಿದ್ಯಾಶ್ರೀ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.