ADVERTISEMENT

ಸಂಶೋಧನಾ ಚತುರೆಯರಿಗೆ ಮನ್ನಣೆಯ ಸಡಗರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:12 IST
Last Updated 23 ಫೆಬ್ರುವರಿ 2019, 20:12 IST
ಮಹಿಳಾ ವಿಜ್ಞಾನಿಗಳು ಖುಷಿ ಹಂಚಿಕೊಂಡರು –ಪ್ರಜಾವಾಣಿ ಚಿತ್ರ
ಮಹಿಳಾ ವಿಜ್ಞಾನಿಗಳು ಖುಷಿ ಹಂಚಿಕೊಂಡರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ದಶಕಗಳಿಂದ ವೈಮಾನಿಕ ಹಾಗೂ ರಕ್ಷಣಾ ಸಂಶೋಧನೆಯಲ್ಲಿ ಸದ್ದಿಲ್ಲದೇ ಸಾಧನೆ ಮಾಡಿದ ಮಹಿಳಾ ವಿಜ್ಞಾನಿಗಳ ಸಡಗರಕ್ಕೆ ಪಾರವೇ ಇರಲಿಲ್ಲ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ವೈಮಾನಿಕ ಅಭಿವೃದ್ಧಿ ಏಜೆನ್ಸಿಗಳ (ಎಡಿಎ) ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಅವರೆಲ್ಲ ಏರೋ ಇಂಡಿಯಾ 2019ರ ಡಿಆರ್‌ಡಿಒ ಪ್ರದರ್ಶನ ಮಳಿಗೆಗಳಲ್ಲಿ ಸೇರಿದ್ದರು. ಅವರನ್ನು ಒಗ್ಗೂಡಿಸಿತ್ತು ವೈಮಾನಿಕ ಪ್ರದರ್ಶನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ. ಈ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮಹಿಳಾ ಸಾಧಕಿಯರಿಗೆ ಗುಲಾಬಿ ಹೂವು ನೀಡಿ ಗೌರವಿಸಿದರು.

ರಕ್ಷಣಾ ಸಂಶೋಧನೆ ಕ್ಷೇತ್ರಕ್ಕೆ ತಾವು ಕಾರ್ಯನಿರ್ವಹಿಸುತ್ತಿರುವ ತಂಡಗಳು ಏನೆಲ್ಲ ಕೊಡುಗೆ ನೀಡಿವೆ ಎಂಬುದನ್ನು ಪರಸ್ಪರ ಹಂಚಿಕೊಂಡರು. ಕೆಲವು ಸ್ವಾರಸ್ಯಕರ ವಿಷಯಗಳನ್ನೂ ಮೆಲುಕು ಹಾಕಿದರು.

ADVERTISEMENT

‘ವೈಮಾನಿಕ ಪ್ರದರ್ಶನದಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡಿದ್ದು ಉತ್ತಮ ಬೆಳವಣಿಗೆ. ಡಿಆರ್‌ಡಿಒ ಒಂದರಲ್ಲೇ 49 ಮಹಿಳೆಯರು ಪ್ರಮುಖ ಸಂಶೋಧನಾ ತಂಡಗಳ ಸದಸ್ಯರಾಗಿದ್ದಾರೆ. ಈ ವಿಚಾರ ಅನೇಕರಿಗೆ ತಿಳಿದಿಲ್ಲ. ಇಂತಹ ಕಾರ್ಯಕ್ರಮಗಳಿಂದಾಗಿ ಇನ್ನಷ್ಟು ಹೆಚ್ಚು ವಿದ್ಯಾರ್ಥಿನಿಯರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಆಗುತ್ತದೆ’ ಎನ್ನುತ್ತಾರೆ ಡಿಆರ್‌ಡಿಒ ಹಿರಿಯ ವಿಜ್ಞಾನಿ ಪದ್ಮಾವತಿ.

‘ಡಿಆರ್‌ಡಿಒದ ಎಲ್ಲ ಸಂಶೊಧನಾ ವಿಭಾಗದಲ್ಲೂ ಮಹಿಳೆಯರು ಗಣನೀಯ ಕೊಡುಗೆ ನೀಡಿದ್ದಾರೆ. ಏವಿಯಾನಿಕ್ಸ್‌, ರಕ್ಷಣಾ ಸಾಮಗ್ರಿಗಳ ಸಂಶೋಧನೆ, ಶಸ್ತ್ರಾಸ್ತ್ರಗಳನ್ನು ಬಿಡುಗಡೆ ಮಾಡುವ ಉಪಕರಣ, ಸಂಶೋಧನಾ ಯೋಜನೆಗಳನ್ನು ಸಂಪೂರ್ಣಗೊಳಿಸುವಂತಹ ಪ್ರಮುಖ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಮಹಿಳಾ ವಿಜ್ಞಾನಿಗಳ ಪಾಲೂ ಇದೆ’ ಎಂದು ಪದ್ಮಾವತಿ ಹೆಮ್ಮೆಯಿಂದ ಹೇಳಿಕೊಂಡರು. ಅವರು ಸಂಶೋಧನೆಗಳಿಗೆ ಐದು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ.

‘ನಾವು ಕೇವಲ ನಾಲ್ಕು ಕೋಣೆಗಳ ನಡುವಿನ ಸಂಶೋಧನೆಗೆ ಸೀಮಿತ ಆಗಿಲ್ಲ. ವಿಮಾನಗಳ ಅಂತಿಮ ಹಂತದ ತಪಾಸಣೆಯಂತಹ ಕ್ಲಿಷ್ಟ ಸವಾಲುಗಳನ್ನೂ ನಾವು ದಿಟ್ಟವಾಗಿ ನಿರ್ವಹಿಸಿದ್ದೇವೆ’ ಎನ್ನುತ್ತಾರೆ ವಿಜ್ಞಾನಿ ಲಕ್ಷ್ಮೀ ರವಿಶಂಕರ್‌.

‘ಮಹಿಳೆಯರಿಗೆ ಅನೇಕ ಕಾರ್ಯಗಳನ್ನು ಒಟ್ಟೊಟ್ಟಿಗೆ ನಡೆಸುವಂತಹ ಸಾಮರ್ಥ್ಯ ಇರುತ್ತದೆ. ಪ್ರಯೋಗಾಲಯದಲ್ಲಿ ಕೆಲಸ ಮಾಡುವಷ್ಟೇ ತನ್ಮಯರಾಗಿ ಅಡುಗೆ ಮನೆಯಲ್ಲೂ ಕಾರ್ಯ ನಿರ್ವಹಿಸುತ್ತೇವೆ. ಇಂತಹ ಅನುಭವ ದೇಶದ ರಕ್ಷಣಾ ಸಂಶೋಧನೆಗೆ ಹೊಸ ಆಯಾಮ ನೀಡಬಲ್ಲುದು. ಇನ್ನಷ್ಟು ಮಹಿಳೆಯರು ಈ ಕ್ಷೇತ್ರಕ್ಕೆ ಬರುವಂತಾಗಬೇಕು’ ಎಂದು ಹೈದರಾಬಾದ್‌ನ ಎಆರ್‌ಡಿಸಿಯ ವಿಜ್ಞಾನಿ ಪ್ರಮೀಳಾ ತಿಳಿಸಿದರು.

‘ನಾವು ಅನೇಕ ಎಂಜಿನಿಯರಿಂಗ್‌ ಹಾಗೂ ವಿಜ್ಞಾನ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ರಕ್ಷಣಾ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಆಹ್ವಾನ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಹೈದರಾಬಾದ್‌ನ ಎಆರ್‌ಡಿಸಿಯ ವಿಜ್ಞಾನಿ ಶಾರದಾಪ್ರಭಾ ತಿಳಿಸಿದರು.

**

ರಕ್ಷಣಾ ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರನ್ನು ಪುರುಷರಷ್ಟೇ ಸಮಾನವಾಗಿ ನಡೆಸಿಕೊಳ್ಳುತ್ತಾರೆ. ಅನೇಕ ಕ್ಲಿಷ್ಟ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲೂ ಪುರುಷ ವಿಜ್ಞಾನಿಗಳಷ್ಟೇ ನಮ್ಮ ಕೊಡುಗೆಯೂ ಇದೆ
-ಪ್ರಮೀಳಾ, ವಿಜ್ಞಾನಿ, ಎಆರ್‌ಡಿಸಿ, ಹೈದರಾಬಾದ್‌

*

ಮಹಿಳೆಯರು ಇನ್ನೊಬ್ಬರ ಸಂಕಷ್ಟವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ರಕ್ಷಣಾ ಸಂಶೋಧನೆ ಒಂದು ಸಾಂಘಿಕ ಪ್ರಯತ್ನ. ಹಾಗಾಗಿ ಇಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದಷ್ಟೂ ಸಂಶೋಧನೆಗಳು ಹೆಚ್ಚು ಫಲಪ್ರದವಾಗುತ್ತವೆ
-ಶಾರದಾಪ್ರಭಾ, ವಿಜ್ಞಾನಿ, ಎಆರ್‌ಡಿಸಿ, ಹೈದರಾಬಾದ್‌

ಮಹಿಳಾ ದಿನದ ವಿಶೇಷಗಳು

* ವೈಮಾನಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು ಅಂಚೆ ಚೀಟಿ ಬಿಡುಗಡೆ

* ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳು ಪುಸ್ತಕ ಬಿಡುಗಡೆ

* ವೈಮಾನಿಕ ಸಂಶೋಧನೆಯಲ್ಲಿ ತೊಡಗಿರುವ ಮಹಿಳಾ ವಿಜ್ಞಾನಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಸೌಲಭ್ಯ ಪ್ರಕಟಣೆ

* ರಕ್ಷಣಾ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವಾರ್ಪಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.