ADVERTISEMENT

ಕರ್ಫ್ಯೂ ಮುಗಿದ ಮೇಲೆ ಎಸ್ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ನಿಗದಿ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 4:59 IST
Last Updated 27 ಮಾರ್ಚ್ 2020, 4:59 IST
ಸಚಿವ ಎಸ್. ಸುರೇಶ್ ಕುಮಾರ್
ಸಚಿವ ಎಸ್. ಸುರೇಶ್ ಕುಮಾರ್   

ಬೆಂಗಳೂರು: ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಎಸ್ಎಸ್ಎಲ್‍‌ಸಿ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹತಾಶರಾಗಬೇಡಿ. ಕೊರೊನಾವನ್ನು ಕೂಡ ಸೂಕ್ತ ರೀತಿಯಲ್ಲಿ ಎದುರಿಸಿ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ಅವರು, ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಗಳು ಇಂದು ಆರಂಭವಾಗಬೇಕಿತ್ತು. ರಾಜ್ಯದ ಸುಮಾರು ಎಂಟೂವರೆ ಲಕ್ಷ ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ಕಾರಣಾಂತರಗಳಿಂದ ಪರೀಕ್ಷೆಗಳನ್ನೆಲ್ಲ ಮುಂದೂಡಲಾಗಿದೆ. ಪಿಯುಸಿಯ ಕೊನೆಯ ಇಂಗ್ಲಿಷ್ ಪರೀಕ್ಷೆಯನ್ನು ಮುಂದೂಡಲಾಗಿದೆ. 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಎಸ್ಎಸ್ಎಲ್‌ಪರೀಕ್ಷೆಯೇ ಜೀವನವಲ್ಲ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿರುತ್ತೇನೆ. ಜೀವನದಲ್ಲಿ ಅನೇಕ ಪರೀಕ್ಷೆಗಳು ಬರುತ್ತವೆ. ಅದರಲ್ಲಿ ಇಡೀ ಜಗತ್ತಿಗೆ ಬಂದಿರುವ ಕೊರೊನಾ ಪರೀಕ್ಷೆಯನ್ನು ಕೂಡ ಎದುರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 14 ಅಂದರೆ ಕರ್ಫ್ಯೂ ಮುಗಿದ ಮೇಲೆ ಪರೀಕ್ಷೆ ದಿನಾಂಕವನ್ನು ನಿಗಧಿಪಡಿಸಲಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮುಂದಿನ ದಿನಾಂಕದಂದು ಪರೀಕ್ಷೆಯನ್ನು ಬರೆಯಲು ಸಿದ್ಧರಾಗಿ. ನಾನು ಎಲ್ಲರಿಗೂ ವಿಶ್ವಾಸ ತುಂಬುವ ಮಾತುಗಳನ್ನಾಡುತ್ತೇನೆ ಹತಾಶರಾಗಬೇಡಿ. ಇದೊಂದು ವಿಶ್ವವ್ಯಾಪಿ ಎದ್ದಿರುವ ಸವಾಲು. ವಿದ್ಯಾರ್ಥಿಗಳು ಕೂಡ ಈ ಸಮರದಲ್ಲಿ ಪಾಲ್ಗೊಂಡು ಮನೆಯಿಂದ ಎಲ್ಲೂ ಹೊರಹೋಗದಂತೆ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕರ್ಫ್ಯೂ ಮುಗಿದ ಬಳಿಕ ಪರೀಕ್ಷೆ ದಿನಾಂಕ ನಿಗದಿಯಾಗಲಿದೆ. ಅಲ್ಲಿವರೆಗೂ ದಿನಕ್ಕೊಂದರಂತೆ ಪಠ್ಯವನ್ನು ಓದಿ. ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಬೇಜಾರಾಗದೆ, ಹತಾಶರಾಗದೆ ಲವಲವಿಕೆಯಿಂದ ಇರಿ. ಕೊರೊನಾ ವಿರುದ್ಧ ಯುದ್ಧವನ್ನು ಗೆಲ್ಲುತ್ತೇವೆ. ಎಸ್ಎಸ್ಎಲ್‌ಸಿ ಯುದ್ಧವನ್ನು ಕೂಡ ಗೆಲ್ಲಿ. ಒಳ್ಳೆ ಆರೋಗ್ಯ ಕಾಪಾಡಿಕೊಳ್ಳಿ. ಭರವಸೆಯ ದಿನಗಳನ್ನು ಎದುರುನೋಡಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.