ವಿಜಯಪುರ:‘ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಿಗೆ ಕಾಂಗ್ರೆಸ್ ಮೂರು ಭಾಗವಾಗಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ ಗುರುವಾರ ಇಲ್ಲಿ ಭವಿಷ್ಯ ನುಡಿದರು.
‘ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ, ಕಾಂಗ್ರೆಸ್‌ನ ಅನೇಕ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಕೆಲವರು ಬೇರೆಡೆ ಹೋಗಲಿದ್ದಾರೆ. ಉಳಿದವರು ಅಲ್ಲಿಯೇ ಇರಲಿದ್ದಾರೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಹೇಳಿದರು.
‘ರಾಹುಲ್ ಗಾಂಧಿಗೆ ಬಡತನ ಏನು ಎಂಬುದು ಗೊತ್ತಿಲ್ಲ. ನಾಯಕತ್ವದ ಕೊರತೆ ಇದೆ. ಜೋಕರ್ ಆಗಿದ್ದಾರೆ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಇದು ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ. ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆಯುತ್ತಿದೆ. ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ಕಾರಜೋಳ ಲೇವಡಿ ಮಾಡಿದರು.
ರೆಸಾರ್ಟ್‌ನಲ್ಲಿ ವಿಶ್ರಾಂತಿ:‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿರುವ ಸಂದರ್ಭ ಪ್ರವಾಸ ನಡೆಸಬೇಕಿತ್ತು. ನೀರು, ಮೇವು, ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕಿದೆ. ಜನಪರ ಕಾಳಜಿಯನ್ನೇ ಮರೆತಿದ್ದಾರೆ. ಉತ್ತರ ಕರ್ನಾಟಕ ಅವರ ನೆನಪಲ್ಲೇ ಇಲ್ಲದಾಗಿದೆ’ ಎಂದು ಕಾರ್ಯಕರ್ತರ ಸಭೆಯಲ್ಲಿ ಆರೋಪಿಸಿದರು.
‘ರಾಜ್ಯದ 20 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಈ ಕುರಿತಂತೆ ನಾನು ಬೆಟ್ಟಿಂಗ್ ಕಟ್ಟಲು ಸಿದ್ಧ. ಯಾರು ಬೇಕಾದರೂ ಮುಂದೆ ಬರಬಹುದು. ನಾನು ₹ 1 ಬೆಟ್ಟಿಂಗ್ ಕಟ್ಟುವೆ’ ಎಂದು ಗೋವಿಂದ ಕಾರಜೋಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.