ADVERTISEMENT

ಕೃಷಿ ವಿ.ವಿ 56ನೇ ಘಟಿಕೋತ್ಸವ ಇಂದು: 67 ವಿದ್ಯಾರ್ಥಿಗಳಿಗೆ 133 ಚಿನ್ನದ ಪದಕ

67 ವಿದ್ಯಾರ್ಥಿಗಳಿಗೆ 133 ಚಿನ್ನದ ಪದಕ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:56 IST
Last Updated 8 ಸೆಪ್ಟೆಂಬರ್ 2022, 19:56 IST
   

ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವ ಸಮಾರಂಭ ಸೆಪ್ಟೆಂಬರ್ 9ರಂದು(ಶುಕ್ರವಾರ) ಬೆಳಿಗ್ಗೆ 10ಕ್ಕೆ ವಿ.ವಿ.ಯ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಲಿದೆ’.

‘ಈ ಬಾರಿ ಒಟ್ಟು 1,144 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಇವರಲ್ಲಿ ಸ್ನಾತಕ 751, ಸ್ನಾತಕೋತ್ತರ 304 ಹಾಗೂ 89 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳನ್ನು ಪಡೆಯಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಅವರು
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಟ್ಟು 133 ಚಿನ್ನದ ಪದಕಗಳನ್ನು 67 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು. ಇದರಲ್ಲಿ 47 ವಿದ್ಯಾರ್ಥಿನಿಯರಿಗೆ 109 ಚಿನ್ನದ ಪದಕಗಳು, 18 ವಿದ್ಯಾರ್ಥಿಗಳಿಗೆ 24 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. 129 ವಿದ್ಯಾರ್ಥಿನಿಯರಿಗೆ 4 ವಿದ್ಯಾರ್ಥಿಗಳಿಗೆ ದಾನಿಗಳ ಚಿನ್ನದ ಪದಕ ಪ್ರಶಸ್ತಿ, ಪ್ರಮಾಣಪತ್ರ ಪ್ರದಾನ ಮಾಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ನವದೆಹಲಿ ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್ ಅಧ್ಯಕ್ಷರಾದ ಡಾ.ಆರ್.ಎಸ್. ಪರೋಡ ಅವರು ಘಟಿಕೋತ್ಸವ ಭಾಷಣ ಮಾಡುವರು. ವಿಶ್ವವಿದ್ಯಾಲಯದ ಕುಲಾಧಿಪತಿ, ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಉಪಸ್ಥಿತಿರಿರಲಿದ್ದಾರೆ’ ಎಂದು ಹೇಳಿದರು.

ರೈತ ಎನ್.ಸಿ. ಪಟೇಲ್‌ಗೆ ಗೌರವ ಡಾಕ್ಟರೇಟ್

ಪ್ರಗತಿಪರ ರೈತ ಎನ್‌.ಸಿ. ಪಟೇಲ್‌ ಅವರಿಗೆ 56ನೇ ಘಟಿಕೋತ್ಸವದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು ಎಂದು ಎಂದು ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.

75 ಎಕರೆ ಜಮೀನಿನಲ್ಲಿ ಖಷ್ಕಿ ಮತ್ತು ಕೊಳವೆಬಾವಿ ಆಶ್ರಯದಡಿ ಆಧುನಿಕ ನೀರಾವರಿ, ತಾಂತ್ರಿಕತೆ ಮತ್ತು ಸುಧಾರಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ವಿವಿಧ ಆಹಾರ, ದ್ವಿದಳ ಧಾನ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೆಡ್‌ ಗ್ಲೋಬ್ ದ್ರಾಕ್ಷಿ, ಬೆಂಗಳೂರು ನೀಲಿ ದ್ರಾಕ್ಷಿ, ಬೆಣ್ಣೆಹಣ್ಣು, ಪಟೇಲ್ ಪಸಂದ್ ಮಾವಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಂತಹ ಪ್ರತಿಭಾವಂತ, ಚಿಂತನಶೀಲ ರೈತ ವಿಜ್ಞಾನಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.