ADVERTISEMENT

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ವಿರುದ್ಧ ದೂರು: ಸಿಐಡಿ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 19:24 IST
Last Updated 9 ಆಗಸ್ಟ್ 2023, 19:24 IST
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ   

ಮಂಡ್ಯ/ಮೈಸೂರು: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರ ವಿರುದ್ಧ ಇಲಾಖೆಯ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ನೀಡಿದ್ದಾರೆನ್ನಲಾದ ದೂರಿನ ಸಂಬಂಧ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಮಂಡ್ಯದ ಕೃಷಿ ಇಲಾಖೆ ಕಚೇರಿ ಹಾಗೂ ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಗೆ ಬುಧವಾರ ಭೇಟಿ ನೀಡಿ ವಿಚಾರಣೆ ನಡೆಸಿತು.

ಸಿಐಡಿ ಐಜಿ ಪ್ರವೀಣ್‌ ಮಧುಕರ್‌ ಪವಾರ್‌ ನೇತೃತ್ವದ ತಂಡ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿತು. ಜಂಟಿ ನಿರ್ದೇಶಕ ವಿ.ಎಸ್‌.ಅಶೋಕ್‌ ಅವರೊಂದಿಗೆ ಅಧಿಕಾರಿಗಳು ಮಾಹಿತಿ ಪಡೆದರು.

ನಂತರ, ಪತ್ರ ಬರೆದಿದ್ದಾರೆ ಎನ್ನಲಾದ ಎಲ್ಲಾ ಏಳು ಸಹಾಯಕ ನಿರ್ದೇಶಕ ಜೊತೆ ಅಧಿಕಾರಿಗಳು ಪ್ರತ್ಯೇಕವಾಗಿ ಚರ್ಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಜೊತೆಯಲ್ಲಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದರು. ಪತ್ರವು ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಯಿಂದ ರವಾನೆಯಾಗಿದ್ದರಿಂದ ಅಲ್ಲಿಗೂ, ಅಧಿಕಾರಿಗಳ ತಂಡ ಮಧ್ಯಾಹ್ನ 2.30ಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿತು.

ADVERTISEMENT

ಉಡುಪಿ ಪ್ರಕರಣ: ಸನ್ನಿವೇಶ ಮರುಸೃಷ್ಟಿ

ಉಡುಪಿ: ಇಲ್ಲಿನ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಪ್ರಕರಣದ ತನಿಖೆ ನಡೆಸಲು ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿತು. ಸಿಐಡಿ ಅಧಿಕಾರಿಗಳು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರು, ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಗಳ ಹೇಳಿಕೆ ದಾಖಲಿಸಿಕೊಂಡರು. ಆಳೆತ್ತರದ ಗೊಂಬೆಯನ್ನು ಕಾಲೇಜಿನ ಶೌಚಾಲಯದ ಎದುರು ನಿಲ್ಲಿಸಿ ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಯಿತು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಪಿಎಸ್‌ಐ ಅವರಿಂದ  ಮಾಹಿತಿ ಪಡೆಯಲಾಯಿತು. ಈಗಾಗಲೇ ಸಿಐಡಿ ತಂಡ ಹಿಂದಿನ ತನಿಖಾಧಿಕಾರಿಗಳಿಂದ ಪ್ರಕರಣದ ವಿವರ ಹಾಗೂ ದಾಖಲೆಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.