ADVERTISEMENT

ಮಾರ್ಚ್‌ 20ರಂದು ರಾಜ್ಯಕ್ಕೆ ರಾಹುಲ್‌ ಗಾಂಧಿ; ‘ಗ್ಯಾರಂಟಿ ನಂ. 4’ ಘೋಷಣೆ?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:54 IST
Last Updated 14 ಮಾರ್ಚ್ 2023, 22:54 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಬೆಂಗಳೂರು: ರಾಜ್ಯಕ್ಕೆ ಇದೇ 20ರಂದು ಬರಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬೆಳಗಾವಿಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಯುವಧ್ವನಿ ಸಮಾವೇಶ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

‘ಭಾರತ್‌ ಜೋಡೊ’ ಯಾತ್ರೆಯ ಬಳಿಕ ಮೊದಲ ಬಾರಿಗೆ ರಾಹುಲ್‌ ರಾಜ್ಯಕ್ಕೆ ಬರಲಿದ್ದಾರೆ. ರಾಜ್ಯದ ಯುವಕರನ್ನು ಸೆಳೆಯುವ ಉದ್ದೇಶದಿಂದ ಅವರು, ಈ ಸಮಾವೇಶದಲ್ಲಿ ‘ಗ್ಯಾರಂಟಿ ನಂ. 4’ ಘೋಷಿಸುವ ಸಾಧ್ಯತೆಯೂ ಇದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ‘ಗೃಹ ಜ್ಯೋತಿ’ (ಪ್ರತಿ ಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತ), ‘ಗೃಹಲಕ್ಷ್ಮಿ’ (ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ₹ 2,000), ‘ಅನ್ನಭಾಗ್ಯ‘(ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ) ‘ಗ್ಯಾರಂಟಿ’ಗಳನ್ನು ಕಾಂಗ್ರೆಸ್‌ ಘೋಷಿಸಿದೆ. ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಯುವಕರಿಗೆ ‘ಉದ್ಯೋಗ ಭಾಗ್ಯ’ ಕಲ್ಪಿಸುವ ಭರವಸೆ ನೀಡಲು ಚಿಂತನೆ ನಡೆಸಿದೆ.

ADVERTISEMENT

ರಾಹುಲ್ ಪ್ರವಾಸದ ಸಿದ್ಧತೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬೆಳಗಾವಿಯ ಪಕ್ಷದ ಕಚೇರಿಯಲ್ಲಿ ಇದೇ 16ರಂದು ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳ ನಾಯಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಭಾಗವಹಿಸುವಂತೆ ಬೆಳಗಾವಿ ನಗರ, ಗ್ರಾಮಾಂತರ, ಚಿಕ್ಕೋಡಿ, ಹುಬ್ಬಳ್ಳಿ ನಗರ, ಧಾರವಾಡ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಹಾವೇರಿ ಜಿಲ್ಲಾ ಘಟಕಗಳ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿಗಳು, ಹಾಲಿ– ಮಾಜಿ ಶಾಸಕರು, ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರ ಚಾಮರಾಜನಗರದ ಹೆಗ್ಗವಾಡಿಯಲ್ಲಿರುವ ಮನೆಗೆ ಭೇಟಿ ನೀಡಲಿರುವ ರಾಹುಲ್ ಅವರು, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.