ADVERTISEMENT

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 0:01 IST
Last Updated 26 ನವೆಂಬರ್ 2025, 0:01 IST
<div class="paragraphs"><p>ಸೈಬರ್ ವಂಚನೆ</p></div>

ಸೈಬರ್ ವಂಚನೆ

   

ಬೆಂಗಳೂರು: ದೆಹಲಿ ಮತ್ತು ಗುರುಗ್ರಾಮದ ಎರಡು ಗೇಮಿಂಗ್‌ ಕಂಪನಿಗಳು ಮನುಷ್ಯರ ಸ್ವರೂಪದಲ್ಲಿ ಆಟವಾಡುವಂತೆ ರೂಪಿಸಿದ್ದ ಕೃತಕ ಬುದ್ಧಿಮತ್ತೆ ತಂತ್ರಾಂಶಗಳ ಮೂಲಕ ಆನ್‌ಲೈನ್‌ ಜೂಜು ನಡೆಸಿ, ಚಂದಾದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವುದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಪತ್ತೆ ಮಾಡಿದೆ. ಈ ಕಂಪನಿಗಳಿಗೆ ಸೇರಿದ ₹523.57 ಕೋಟಿ ಮೊತ್ತದ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಆನ್‌ಲೈನ್‌ ಜೂಜು ನಿಷೇಧವಿದ್ದರೂ ಅಂತಹ ಗೇಮ್‌ಗಳನ್ನು ಆಡಿಸುತ್ತಿರುವುದರ ಸಂಬಂಧ ವಿನ್‌ಝೋ ಮತ್ತು ಪಾಕೆಟ್‌ 52 ಎಂಬ ಎರಡು ಗೇಮಿಂಗ್‌ ಆ್ಯಪ್‌ಗಳ ವಿರುದ್ಧ ಇ.ಡಿಯ ಬೆಂಗಳೂರು ವಲಯ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಈ ಆ್ಯಪ್‌ಗಳನ್ನು ನಡೆಸುತ್ತಿರುವ ವಿನ್‌ಝೋ ಗೇಮ್ಸ್‌ ಪ್ರೈ.ಲಿಮಿಟೆಡ್ ಮತ್ತು ನಿರ್ದೇಸ ನೆಟ್‌ವರ್ಕ್ಸ್‌ ಪ್ರೈ. ಲಿಮಿಟೆಡ್‌ ವಿರುದ್ಧ ಇ.ಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು.

ADVERTISEMENT

ಈ ಎರಡೂ ಕಂಪನಿಗಳು ದೆಹಲಿ ಮತ್ತು ಗುರುಗ್ರಾಮದಲ್ಲಿ ಕಚೇರಿಗಳನ್ನು ಹೊಂದಿದ್ದು, ಆ ಕಚೇರಿಗಳ ಮೇಲೆ ಇದೇ 18ರಂದು ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು 22ರವರೆಗೆ ಶೋಧ ನಡೆಸಿದ್ದರು. ಎರಡೂ ಕಂಪನಿಗಳು ಮನುಷ್ಯರ ಹೆಸರಿನಲ್ಲಿ ಎಐ (ಕೃತಕ ಬುದ್ಧಿಮತ್ತೆ) ಖಾತೆಗಳನ್ನು ಸೃಷ್ಟಿಸಿ, ಚಂದಾದಾರರು ಎಐಗಳ ಜತೆಗೆ ಆಡುವಂತೆ ಮಾಡಿದ್ದರು ಎಂಬುದು ಶೋಧದ ವೇಳೆ ಪತ್ತೆಯಾಗಿದೆ.

ಎರಡೂ ಗೇಮಿಂಗ್‌ ಆ್ಯಪ್‌ಗಳಿಗೆ ಲಕ್ಷಕ್ಕೂ ಹೆಚ್ಚು ಚಂದಾದಾರರು ಇದ್ದಾರೆ. ಈ ಚಂದಾದಾರರು ಪರಸ್ಪರರ ವಿರುದ್ಧ ಆಟವಾಡಬಹುದಾಗಿದೆ. ಆದರೆ ಕಂಪನಿಗಳು ತಾವೇ ಎಐ ಚಂದಾದಾರರನ್ನು ಸೃಷ್ಟಿಸಿ, ನೈಜ ಚಂದಾದಾರರು ಅವುಗಳ ಜತೆಗೆ ಆಟವಾಡುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ನೈಜ ಚಂದಾದಾರರು ತಾವು ಮನುಷ್ಯರೊಂದಿಗೇ ಆಟವಾಡುತ್ತಿದ್ದೇವೆ ಎಂದು ತಿಳಿದುಕೊಂಡು, ಜೂಜಾಡುತ್ತಿದ್ದರು. ಈ ರೀತಿಯ ಮೋಸದ ಆಟದ ಬಹುತೇಕ ಸಂದರ್ಭದಲ್ಲಿ ನೈಜ ಚಂದಾದಾರರು ಸೋತಿದ್ದು, ಸಾವಿರ ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ವಿನ್‌ಝೋ ಗೇಮ್ಸ್‌ ಪ್ರೈ.ಲಿಮಿಟೆಡ್‌ ಭಾರತದಲ್ಲಿ ತನ್ನ ಚಂದಾದಾರರಿಂದ ಸಂಗ್ರಹಿಸಿದ ಹಣವನ್ನು ಅಮೆರಿಕದಲ್ಲಿನ ತನ್ನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುವಂತೆ ವ್ಯವಸ್ಥೆ ಮಾಡಿಕೊಂಡಿತ್ತು. ಈ ಕಂಪನಿಗೆ ಸೇರಿದ ₹505 ಕೋಟಿ ಮೊತ್ತದ ಬ್ಯಾಂಕ್‌ ಠೇವಣಿ, ಷೇರು ಮತ್ತು ಮ್ಯೂಚುವಲ್‌ ಫಂಡ್‌ ಹೂಡಿಕೆಗಳನ್ನು, ನಿರ್ದೇಸ ನೆಟ್‌ವರ್ಕ್ಸ್‌ ಪ್ರೈ.ಲಿಮಿಟೆಡ್‌ನ ವಿವಿಧ ಖಾತೆಗಳಲ್ಲಿ ಇದ್ದ ₹18.57 ಕೋಟಿ ಮೊತ್ತದ ಸ್ವತ್ತುಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.