ಬೆಂಗಳೂರು: ‘ವಸ್ತುಗಳನ್ನು ಕೊಳ್ಳುವಾಗ, ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಪ್ರಾಣಿಗಳನ್ನು ಖರೀದಿಸುವಾಗ ತೂಕ, ಗಾತ್ರ ಎಲ್ಲವನ್ನೂ ನೋಡಿ, ಹಲವು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೂ ಗುಣ, ತತ್ವ, ಹಿನ್ನೆಲೆಗಳನ್ನು ಪರಿಶೀಲಿಸುವುದು ಮುಖ್ಯ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ವೇದಿಕೆ ಮೇಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಈ ಎಚ್ಚರಿಕೆ ನೀಡಿದರು.
ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷರು ನೀಡಿರುವ ಎಚ್ಚರಿಕೆ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ.
‘ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಂಡು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಆದರೆ, ಇಂದು ಬಂದರು ನಾಳೆ ಹೋದರು ಎನ್ನುವಂತಾಗಬಾರದು. ಪಕ್ಷಕ್ಕೆ ನಿಷ್ಠಾವಂತರಾಗಿರುವವರನ್ನು ಮಾತ್ರ ಕರೆತನ್ನಿ’ ಎಂದು ಸೂಚಿಸಿದರು.
‘ನಮ್ಮ ಪಕ್ಷವು ತತ್ವ ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ತತ್ವಕ್ಕಾಗಿಯೇ ನಮ್ಮ ಪಕ್ಷದ ನಾಯಕರು ಇಂದಿರಾಗಾಂಧಿಯವರು, ರಾಜೀವ್ ಗಾಂಧಿಯವರು ತಮ್ಮ ಜೀವವನ್ನೆ ತ್ಯಾಗ ಮಾಡಿದ್ದಾರೆ. ಬಡವರು, ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇರುವ ಪಕ್ಷ ನಮ್ಮದು ಎಂದು ಹೇಳಿದರು.
‘ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕಾದರೆ ಅವರ ಗುಣ ಏನು? ಅವರ ಹಿನ್ನೆಲೆ ಏನು? ಅವರು ಯಾವ ತತ್ವವನ್ನು ಪಾಲಿಸುತ್ತಿದ್ದವರು. ಇಂದು ಯಾವ ತತ್ವ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.