ADVERTISEMENT

ಪಿಂಚಣಿ ಸೌಲಭ್ಯ: ಅರೆಬೆತ್ತಲಾಗಿ ನೌಕರರ ಉಪವಾಸ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:46 IST
Last Updated 20 ಫೆಬ್ರುವರಿ 2023, 21:46 IST
ಅನುದಾನಿತ ಶಾಲಾ- ಕಾಲೇಜುಗಳ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಅರೆಬೆತ್ತಲಾಗಿ ಕುಳಿತು ಉಪವಾಸ ಸತ್ಯಾಗ್ರಹ ಆರಂಭಿಸಿದರು
ಅನುದಾನಿತ ಶಾಲಾ- ಕಾಲೇಜುಗಳ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಅರೆಬೆತ್ತಲಾಗಿ ಕುಳಿತು ಉಪವಾಸ ಸತ್ಯಾಗ್ರಹ ಆರಂಭಿಸಿದರು   

ಬೆಂಗಳೂರು: ‘ಪಿಂಚಣಿ ಸೌಲಭ್ಯ ಕಲ್ಪಿಸ ಬೇಕು’ ಎಂದು ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನುದಾನಿತ ಶಾಲಾ- ಕಾಲೇಜುಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ‘ಪ್ರಾಣ ಬಿಟ್ಟೇವು, ಪಿಂಚಣಿ ಬಿಡೆವು’ ಎಂಬ ಘೋಷವಾಕ್ಯದಡಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 137ನೇ ದಿನ ಪೂರೈಸಿತು.

ಉದ್ಯಾನದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಪೆಂಡಾಲ್‌ನಲ್ಲಿ ಅರೆಬೆತ್ತಲಾಗಿ ಕುಳಿತಿದ್ದ ನೌಕರರು, ಉಪವಾಸ ಸತ್ಯಾಗ್ರಹ ಆರಂಭಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಮ್ಮ ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಸೋಮವಾರದಿಂದ 50 ಮಂದಿ ಉಪವಾಸ ಆರಂಭಿಸುತ್ತಿದ್ದೇವೆ. ಹಳೇ ನಿಶ್ಚಿತ ಪಿಂಚಣಿ ಸಿಗುವವರೆಗೂ ಉಪವಾಸ ಕೈಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.

‘ಅನುದಾನಿತ ಶಾಲೆ–ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ನೌಕರರು, ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಿವೃತ್ತಿ ಜೀವನ ಕಷ್ಟಕರವಾಗುವ ಭಯದಲ್ಲಿದ್ದಾರೆ. ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

‘ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಹೋರಾಟ ಮಾಡಲಾಗಿತ್ತು. ಜೊತೆಗೆ, ಸ್ವಾತಂತ್ರ್ಯ ಉದ್ಯಾನದಲ್ಲಿ 137 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ’ ಎಂದು
ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.