ADVERTISEMENT

ಶಿಕ್ಷಣ ನೀತಿ: ಸರ್ಕಾರಿ ಶಾಲೆಗೆ ಕುತ್ತು; ಎಐಡಿಎಸ್‌ಒ ಪ್ರತಿಭಟನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 15:59 IST
Last Updated 4 ಫೆಬ್ರುವರಿ 2025, 15:59 IST
ಸರ್ಕಾರ ರಾಜ್ಯದ 4,200 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಆರೋಪಿಸಿ ಎಐಡಿಎಸ್ಒ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ
ಸರ್ಕಾರ ರಾಜ್ಯದ 4,200 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಆರೋಪಿಸಿ ಎಐಡಿಎಸ್ಒ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ಶಿಕ್ಷಣ ವಿರೋಧಿ ನೀತಿ ಅನುಸರಿಸಿವೆ ಎಂದು ಎಐಡಿಎಸ್‌ಒ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಬಾಷಿಶ್‌ ಪ್ರಹರಾಜ್‌ ದೂರಿದರು.

ಸಂಯೋಜನೆ ಹೆಸರಿನಲ್ಲಿ ರಾಜ್ಯದ 4,200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಆರೋಪಿಸಿ, ಎಐಡಿಎಸ್‌ಒ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ ವ್ಯಾಪಾರೀಕರಣದ ಫಲವಾಗಿ ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿವೆ. 1986ರಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ನೀತಿಗಳು ಶಿಕ್ಷಣದ ಕೇಂದ್ರೀಕರಣ, ವ್ಯಾಪಾರೀಕರಣಕ್ಕೆ ನಾಂದಿ ಹಾಡಿತ್ತು. ಮುಂದೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಇದೇ ನೀತಿ ಅನುಸರಿಸಿಕೊಂಡು ಬಂದ ಫಲವಾಗಿ ಶಿಕ್ಷಣ ವ್ಯಾಪಾರದ ಸರಕಾಗಿದೆ ಎಂದು ಆರೋಪಿಸಿದರು.

ADVERTISEMENT

ದೇಶದ ಸಂಪತ್ತಿನ ಸೃಷ್ಟಿಕರ್ತರಾದ ರೈತರು, ಕಾರ್ಮಿಕರು, ಬಡವರ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳನ್ನು ಮುಚ್ಚಿ ಬಡವರು, ಪರಿಶಿಷ್ಟರು, ನಿರ್ಗತಿಕರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವ  ಸರ್ಕಾರಗಳ ವಿರುದ್ಧ ವಿದ್ಯಾರ್ಥಿಗಳು ದೊಡ್ಡಮಟ್ಟದಲ್ಲಿ ಹೋರಾಟ ಬಲಪಡಿಸಬೇಕಿದೆ ಎಂದರು.

ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಎರಡು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ವಿದ್ಯಾರ್ಥಿಗಳು 36 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಶಾಲೆಗಳನ್ನು ಉಳಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುವುದಾಗಿ ಹೇಳುತ್ತಿದೆ. ರಾಜ್ಯದಲ್ಲಿ ಸುಮಾರು 6,000 ಏಕೋಪಾಧ್ಯಾಯ ಶಾಲೆಗಳಿವೆ. 3,500 ಶಾಲೆಗಳಲ್ಲಿ ಬಳಸಲು ಯೋಗ್ಯವಾದ ಶೌಚಾಲಯಗಳೇ ಇಲ್ಲ. 59,000  ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇಂತಹ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ಹೇಗೆ ಉಳಿಯುತ್ತವೆ ಎಂದು ಪ್ರಶ್ನಿಸಿದರು.

ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಸೌರವ್‌ ಘೋಷ್, ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್‌. ಅಶ್ವಿನಿ, ಕಾರ್ಯದರ್ಶಿ ಅಜಯ್‌ ಕಾಮತ್‌, ಉಪಾಧ್ಯಕ್ಷರಾದ ಅಭಯ ದಿವಾಕರ್‌, ಅಪೂರ್ವ, ಸುಭಾಷ್, ಮಹಾಂತೇಶ್, ಕಲ್ಯಾಣ್, ವಿನಯ್‌ ಚಂದ್ರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.