ADVERTISEMENT

ಗಂಟೆಗೆ 90 ವಿಮಾನಗಳ ಹಾರಾಟ

ಕೆಐಎ ಎರಡನೇ ರನ್‌ವೇ ಡಿಸೆಂಬರ್‌ನಲ್ಲಿ ಬಳಕೆಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 18:32 IST
Last Updated 3 ನವೆಂಬರ್ 2019, 18:32 IST
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್‌ವೇಯಲ್ಲಿ ಪ್ರಾಯೋಗಿಕ ಹಾರಾಟ ನಡೆಸಿದ್ದ ಇಂಡಿಗೊ ವಿಮಾನ
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್‌ವೇಯಲ್ಲಿ ಪ್ರಾಯೋಗಿಕ ಹಾರಾಟ ನಡೆಸಿದ್ದ ಇಂಡಿಗೊ ವಿಮಾನ   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎರಡನೇ ರನ್‌ವೇ ಡಿಸೆಂಬರ್‌ ಮೊದಲ ವಾರದಲ್ಲಿ ಬಳಕೆಗೆ ಲಭ್ಯವಾಗಲಿದೆ.

‘ಎರಡನೇ ರನ್ ವೇಯಲ್ಲಿ ಇತ್ತೀಚೆಗೆ ನಡೆಸಿದ್ದ ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ. ರನ್‌ವೇಗೆ ಅಂತಿಮ ರೂಪ ನೀಡುವ ಕೆಲಸ ಪ್ರಗತಿಯಲ್ಲಿದ್ದು, ಇದೇ ತಿಂಗಳ ಅಂತ್ಯದಲ್ಲಿ ಅದು ಸಹ ಮುಗಿಯಲಿದೆ’ ಎಂದು ನಿಲ್ದಾಣದ ಪ್ರತಿನಿಧಿಯೊಬ್ಬರು ಹೇಳಿದರು.

‘ನಿಲ್ದಾಣ ಬಳಸುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಆ ಸಂಖ್ಯೆಗೆ ತಕ್ಕಂತೆ ವಿಮಾನಗಳ ಹಾರಾಟ ನಡೆಸಲು ಸದ್ಯ ಒಂದೇ ರನ್‌ವೇ ಇದೆ. ಇದರಿಂದ ನಾನಾ ಸಮಸ್ಯೆಗಳು ಉದ್ಭವಿಸುತ್ತಿವೆ. ಎರಡನೇ ರನ್‌ವೇ ಆರಂಭವಾದರೆ, ಗಂಟೆಗೆ 90 ವಿಮಾನಗಳು ಹಾರಾಟ ನಡೆಸುವ ಸಾಮರ್ಥ್ಯ ನಿಲ್ದಾಣಕ್ಕೆ ಬರಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘4 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿರುವ ಎರಡನೇ ರನ್‌ವೇ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್‌ಗೆ ಅನುಕೂಲವಾಗುವಆಧುನಿಕ ಸೌಕರ್ಯಗಳನ್ನು ಹೊಂದಿದೆ’ ಎಂದರು.

ವಿಮಾನಯಾನ ಕಂಪನಿಗಳಿಗೆ ಮಾಹಿತಿ: ಎರಡನೇ ರನ್‌ವೇ ಬಳಕೆ ಸಂಬಂಧ ವಿಮಾನಯಾನ ಕಂಪನಿಗಳ ಜೊತೆ ನಿಲ್ದಾಣದ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಯಾವ ಕಂಪನಿಯ ವಿಮಾನಗಳಿಗೆ ಮೊದಲಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಎರಡನೇ ರನ್‌ವೇಯಲ್ಲಿ ಹಾರಾಟ ನಡೆಸುವ ವಿಮಾನಗಳ ಪಟ್ಟಿ ಸದ್ಯದಲ್ಲೇ ಬಹಿರಂಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.