ಬೆಂಗಳೂರು: ₹9.82 ಕೋಟಿ ಮೊತ್ತದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಐಶ್ವರ್ಯ ಗೌಡ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 14 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಇಸಿಐಆರ್ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು ಗುರುವಾರ ಐಶ್ವರ್ಯ ಗೌಡ ಅವರ ಆರ್‌ಎಂಸಿ ಯಾರ್ಡ್ ನಿವಾಸ ಮತ್ತು ಮಂಡ್ಯದ ಕಿರುಗಾವಲಿನ ನಿವಾಸದ ಮೇಲೆ ದಾಳಿ ನಡೆಸಿದ್ದರು.
‘ಆರ್‌ಎಂಸಿ ಯಾರ್ಡ್ ನಿವಾಸದಲ್ಲಿ ಇದ್ದ ಐಶ್ವರ್ಯ ಅವರನ್ನು ಎಂಟು ತಾಸು ವಿಚಾರಣೆ ನಡೆಸಿ ಗುರುವಾರ ರಾತ್ರಿಯ ವೇಳೆಗೆ ವಶಕ್ಕೆ ಪಡೆಯಲಾಗಿತ್ತು. ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತಂದು ವಿಚಾರಣೆ ಮುಂದುವರಿಸಲಾಗಿತ್ತು. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಅವರನ್ನು ಶುಕ್ರವಾರ ಹಾಜರುಪಡಿಸಿ, 14 ದಿನಗಳ ಕಸ್ಟಡಿಗೆ ಪಡೆಯಲಾಯಿತು’ ಎಂದು ಮೂಲಗಳು ತಿಳಿಸಿವೆ.
‘ಚಿನ್ನ ವಂಚನೆಯಿಂದ ಗಳಿಸಿದ ಹಣವನ್ನು ಐಶ್ವರ್ಯ ಗೌಡ ಯಾವ ಉದ್ದೇಶಕ್ಕೆ ಬಳಸಿದ್ದಾರೆ ಮತ್ತು ಆ ಹಣ ಯಾರಿಗೆ ತಲುಪಿದೆ ಎಂಬುದಕ್ಕೆ ಸಂಬಂಧಿಸಿದ ಮಾಹಿತಿಗಳು ದೊರೆತಿವೆ. ಈ ಬಗ್ಗೆ ವಿಸ್ತೃತ ತನಿಖೆಯ ಅಗತ್ಯವಿದೆ. ಹೀಗಾಗಿ ಆರೋಪಿಯನ್ನು ಕಸ್ಟಡಿಗೆ ನೀಡಬೇಕು ಎಂದು ಇ.ಡಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು’ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.