ADVERTISEMENT

ಚಿನ್ನಾಭರಣ ವಂಚನೆ ಪ್ರಕರಣ | ಪ್ರಭಾವಿಗಳ ಜತೆ ಐಶ್ವರ್ಯ ಗೌಡ ವ್ಯವಹಾರ: ಇ.ಡಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 0:29 IST
Last Updated 27 ಏಪ್ರಿಲ್ 2025, 0:29 IST
ಐಶ್ವರ್ಯ ಗೌಡ
ಐಶ್ವರ್ಯ ಗೌಡ   

ಬೆಂಗಳೂರು: ‘ನಾವು ಹೇಳಿದಂತೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಕೊಡಿಸುತ್ತೇವೆ ಎಂದು ಐಶ್ವರ್ಯ ಗೌಡ ಮತ್ತು ಅವರ ಪತಿ ಹರೀಶ್‌ ಕೆ.ಎನ್‌. ಹಲವು ಉದ್ಯಮಿಗಳಿಗೆ ವಂಚಿಸಿದ್ದಾರೆ. ಕರ್ನಾಟಕದ ಪ್ರಭಾವಿ ವ್ಯಕ್ತಿಗಳ ಜತೆ ಹಣಕಾಸು ವ್ಯವಹಾರ ನಡೆಸಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

‘ಹೂಡಿಕೆ ಮಾಡುವಂತೆ ಉದ್ಯಮಿಗಳಿಂದ ಅಪಾರ ಪ್ರಮಾಣದ ಚಿನ್ನ, ನಗದು ಪಡೆದುಕೊಂಡಿದ್ದಾರೆ. ತಮ್ಮ ಬ್ಯಾಂಕ್‌ ಖಾತೆಗಳಿಗೂ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅವುಗಳನ್ನು ಹಿಂತಿರುಗಿಸದೇ ಇದ್ದಾಗ, ಬೆದರಿಕೆ ಹಾಕಿದ್ದಾರೆ ಎಂಬುದು ಈವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ. ವಂಚನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಇ.ಡಿ ಹೇಳಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ, ಹರೀಶ್‌ ಅವರ ಮನೆಗಳು ಮತ್ತು ಅವರ ಸಂಪರ್ಕದಲ್ಲಿ ಇದ್ದ ಕೆಲ ಪ್ರಭಾವಿಗಳ ಮನೆಯೂ ಸೇರಿ 14 ಕಡೆ ಎರಡು ದಿನ ಸತತ ತಪಾಸಣೆ ನಡೆಸಿದ್ದೇವೆ. ಈ ವೇಳೆ ಬ್ಯಾಂಕ್‌ ಖಾತೆ ವಹಿವಾಟು ದಾಖಲೆಗಳು, ಹೂಡಿಕೆ ಪತ್ರಗಳು, ₹2.25 ಕೋಟಿ ನಗದು ಮತ್ತು ಹಲವು ದುಬಾರಿ ಬೆಲೆಯ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

ADVERTISEMENT

‘ತಮ್ಮಲ್ಲಿ ಹೂಡಿಕೆ ಮಾಡಿದವರು ಹಣವನ್ನು ವಾಪಸ್‌ ಕೇಳಿದಾಗ ಐಶ್ವರ್ಯ ಅವರು ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳ ಹೆಸರು ಬಳಸಿಕೊಂಡಿದ್ದಾರೆ. ಹಣ ಕೇಳಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಕೆಲ ರಾಜಕಾರಣಿಗಳ ಜತೆ ಐಶ್ವರ್ಯ ಸಂಪರ್ಕದಲ್ಲಿ ಇದ್ದುದಕ್ಕೆ ಮತ್ತು ಅವರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದಕ್ಕೆ ಸಾಕ್ಷ್ಯಗಳು ದೊರೆತಿವೆ. ವಂಚನೆಯಲ್ಲಿ ರಾಜಕಾರಣಿಗಳ ಪಾತ್ರ ಇದೆಯೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.

ನನ್ನನ್ನು ಮುಗಿಸಲು ಷಡ್ಯಂತ್ರ: ವಿನಯ್ ಕುಲಕರ್ಣಿ

‘ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಹೀಗೆ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಮನೆಯಲ್ಲಿ ಇ.ಡಿ ಅಧಿಕಾರಿಗಳು ಇದೇ ಗುರುವಾರ ತಪಾಸಣೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ ‘ತನಿಖೆಯ ಹೆಸರಿನಲ್ಲಿ ಒಂದು ತಿಂಗಳಿಂದ ನನಗೆ ಹಿಂಸೆ ನೀಡಲಾಗುತ್ತಿದೆ. ಐಶ್ವರ್ಯ ಜತೆಗೆ ನನ್ನ ಆರ್ಥಿಕ ವ್ಯವಹಾರ ಇದ್ದರೆ ಅದನ್ನು ಸುಲಭವಾಗಿ ಪತ್ತೆ ಮಾಡಬಹುದಿತ್ತು. ಆದರೆ ಅಂಥದ್ದೇನೂ ಇಲ್ಲ. ಹೀಗಾಗಿಯೇ ಅನಗತ್ಯವಾಗಿ ಹಿಂಸೆ ನೀಡುತ್ತಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.