
ಅಮರ್ಜಾ ನದಿಯಲ್ಲಿ ಸುರಿಯಲಾದ ಅರೆ–ಬರೆ ಸುಟ್ಟ ದಾಖಲೆ ಪತ್ರ
ಬೆಂಗಳೂರು: ಆಳಂದ ಮತ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು ಶನಿವಾರ ಐವರನ್ನು ವಿಚಾರಣೆ ನಡೆಸಿದ್ದು, ಮಿನಿಟ್ರಕ್ ಚಾಲಕ ವಿಶಾಲ್ ಅವರನ್ನು ವಶಕ್ಕೆ ಪಡೆದಿದೆ.
ಆಳಂದ ಕ್ಷೇತ್ರದಲ್ಲಿ 6,018 ಮತದಾರರ ಚೀಟಿಗಳನ್ನು ಅಕ್ರಮವಾಗಿ ರದ್ದುಪಡಿಸಲು ಯತ್ನಿಸಿದ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಅಕ್ಟೋಬರ್ 17ರಂದು, ಬಿಜೆಪಿಯ ಪರಾಜಿತ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ಕಲಬುರಗಿ ನಿವಾಸದ ಮೇಲೆ ದಾಳಿ ನಡೆಸಿತ್ತು.
ಇದೇ ವೇಳೆ, ಗುತ್ತೇದಾರ ಅವರ ಆಳಂದ ಮನೆಯ ಎದುರು ಮತದಾರರ ಪಟ್ಟಿ, ಚೀಟಿಗಳು ಸೇರಿ ಅಪಾರ ಪ್ರಮಾಣದ ದಾಖಲೆಗಳಿಗೆ ಬೆಂಕಿ ಇಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕೆ ತೆರಳುವ ಮೊದಲೇ ಅರೆಬರೆ ಸುಟ್ಟ ಕಾಗದ ಪತ್ರಗಳನ್ನು ಮಿನಿಟ್ರಕ್ ಒಂದರಲ್ಲಿ ತುಂಬಿಸಿ, ಅಮರ್ಜಾ ನದಿಗೆ ಸುರಿಯಲಾಗಿತ್ತು.
ತನಿಖಾಧಿಕಾರಿಗಳು ಮಿನಿಟ್ರಕ್ ಚಾಲಕನ್ನು ವಿಚಾರಣೆ ನಡೆಸಿ, ಬಿಟ್ಟು ಕಳುಹಿಸಿದ್ದರು. ಶನಿವಾರ ವಿಶಾಲ್, ಡೇಟಾ ಸೆಂಟರ್ ಉದ್ಯೋಗಿಗಳಾದ ಅಕ್ರಂ, ನದೀಮ್, ಜುನೇದ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು. ವಿಶಾಲ್ ಅವರನ್ನು ರಾತ್ರಿಯವರೆಗೆ ವಿಚಾರಣೆ ನಡೆಸಿ, ನಂತರ ವಶಕ್ಕೆ ಪಡೆಯಲಾಗಿದೆ. ಇತರರ ವಿಚಾರಣೆ ರಾತ್ರಿಯೂ ಮುಂದುವರೆದಿತ್ತು.
‘ಸುಟ್ಟ ಹಾಕಲಾಗಿದ್ದ ಕಾಗದ ಪತ್ರಗಳು ಯಾವುದು, ಯಾರಿಗೆ ಸಂಬಂಧಿಸಿದ್ದು ಎಂಬುದು ನನಗೆ ಗೊತ್ತಿಲ್ಲ. ನಾನು ಚಾಲಕನಷ್ಟೆ. ಮಿನಿಟ್ರಕ್ ಮಾಲೀಕ ಸಿದ್ಧಾರೂಢ ಅವರು ಕರೆ ಮಾಡಿ, ತುರ್ತಾಗಿ ಕಸ ಸಾಗಿಸಬೇಕು ಎಂದು ಸೂಚಿಸಿದರು. ತಾನು ಅದನ್ನು ಪಾಲಿಸಿದೆ ಅಷ್ಟೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಆದರೆ, ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಮತ್ತು ಕಾಗದ ಪತ್ರಗಳನ್ನು ನದಿಗೆ ಎಸೆದಿದ್ದ. ಅವನ ಕೃತ್ಯಕ್ಕೂ ಹೇಳಿಕೆಗೂ ಹೊಂದಿಕೆಯಾಗುತ್ತಿಲ್ಲ. ಹೆಚ್ಚಿನ ವಿಚಾರಣೆಗಾಗಿ ಅವನನ್ನು ವಶಕ್ಕೆ ಪಡೆಯಲಾಗಿದೆ. ಮಿನಿಟ್ರಕ್ ಮಾಲೀಕ ಸಿದ್ಧಾರೂಢ ಅವರನ್ನು ವಿಚಾರಣೆಗೆ ಕರೆಯಲಾಗುತ್ತದೆ’ ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.