ADVERTISEMENT

‘ಹೋರಾಟದ ಹಾದಿ’ಯಲ್ಲಿ ದುರ್ಮರಣ

ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ನಡಿಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 2:08 IST
Last Updated 29 ಜನವರಿ 2019, 2:08 IST
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಜಿಲ್ಲಾಡಳಿತದ ವಿರುದ್ಧ ಬೇಗೂರು ಬಳಿ ಪ್ರತಿಭಟನೆ ನಡೆಸಿದರು
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಜಿಲ್ಲಾಡಳಿತದ ವಿರುದ್ಧ ಬೇಗೂರು ಬಳಿ ಪ್ರತಿಭಟನೆ ನಡೆಸಿದರು   

ಬೆಂಗಳೂರು/ದಾಬಸ್‌ಪೇಟೆ: ‘ರಾಜ್ಯ ದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರಿನ ವರೆಗೆ ಮಹಿಳೆಯರು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರೇಣುಕಮ್ಮ (55) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಖೈರಾವಡಗಿ ಗ್ರಾಮದ ರೇಣುಕಮ್ಮ, ಚಿತ್ರದುರ್ಗದಿಂದ ಪಾದಯಾತ್ರೆಯಲ್ಲಿ ಬೆಂಗಳೂರಿನತ್ತ ಬರುತ್ತಿದ್ದರು. ಭಾನುವಾರ ಸಿದ್ಧಗಂಗಾ ಮಠಕ್ಕೆ ಬಂದಿದ್ದ ಪಾದಯಾತ್ರೆ, ಅಲ್ಲಿಂದ ದಾಬಸ್‌ಪೇಟೆಯತ್ತ ಹೊರಟಿತ್ತು.

ರಾಷ್ಟ್ರೀಯ ಹೆದ್ದಾರಿ 4ರ ಕುಲವನಹಳ್ಳಿ ಬಳಿ ರಾತ್ರಿ ಬುಲೆಟ್‌ ಬೈಕನ್ನು ವೇಗವಾಗಿ ಓಡಿಸಿಕೊಂಡು ಬಂದಿದ್ದ ಸವಾರ, ಪಾದಯಾತ್ರೆಯಲ್ಲಿದ್ದ ರೇಣುಕಮ್ಮ ಅವರಿಗೆ ಗುದ್ದಿಸಿದ್ದ. ಸ್ಥಳದಲ್ಲೇ ಕುಸಿದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಫಲಿಸದೇ ಅವರು ಮೃತಪಟ್ಟರು.

ADVERTISEMENT

‘ಬೈಕ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಕೇರಳ ನೋಂದಣಿಯ ಸಂಖ್ಯೆಯ ಬೈಕ್‌ನ ಸವಾರ, ಅಪಘಾತದ ಬಳಿಕ ಪರಾರಿಯಾಗಿದ್ದಾನೆ. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮಹಿಳೆಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕೂಲಿ ಮಾಡುತ್ತಿದ್ದ ರೇಣುಕಮ್ಮ: ‘ಮೃತ ರೇಣುಕಮ್ಮ, ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತಿ ಶಿವಪ್ಪ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗಿದೆ. ಚಿಕ್ಕ ಮಗಳು, ಅಂಗವಿಕಲೆಯಾಗಿದ್ದು ಬಿ.ಕಾಂ ಓದುತ್ತಿ
ದ್ದಾಳೆ. ಅವರ ಅಳಿಯಂದಿರು ಮದ್ಯ ವ್ಯಸನಿಗಳಾಗಿದ್ದು, ನಿತ್ಯವೂ ಕುಡಿದು ಬಂದು ಜಗಳ ಮಾಡುತ್ತಾರೆ. ಅದನ್ನು ನೋಡಿಯೇ ಆಕೆ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು’ ಎಂದು ಸಹಯಾತ್ರಿ ವಿರೂಪ್ಪಮ್ಮ ಹೇಳಿದರು.

ಗುಂಡಮ್ಮ ಎಂಬುವರು, ‘ನಮ್ ಊರಾಗ್ ಕುಡುಕರ ಸಂಖ್ಯೆ ಭಾಳ್ ಆಗೈತಿ. ಅದಕ್ ನಾವೆಲ್ಲ ಈ ಹೋರಾಟ ಮಾಡಾಕ್‌ ಹತ್ತೀವಿ. ನಾವು ಅನ್ನ ಕೊಡಿ, ಸಾಲ ಮನ್ನಾ ಮಾಡಿ ಅಂತಾ ಕೇಳಾಕ್ಕತ್ತಿಲ್ಲ. ನಮ್ಮ ಮನೆ ಹಾಳು ಮಾಡಾಕ್‌ ಹೊಂಟ ಸೆರೆ ನಿಷೇಧ ಮಾಡ್ರಿ ಅನ್ನಾಕ್ಕತ್ತೀವಿ’ ಎಂದು ಅವರು ತಿಳಿಸಿದರು.

ಜಿಲ್ಲಾಡಳಿತದ ನಿರ್ಲಕ್ಷ್ಯ: ‘ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ರೇಣುಕಮ್ಮ ಮೃತಪಟ್ಟಿದ್ದಾರೆ’ ಎಂದು ಹೋರಾಟದ ಸಂಚಾಲಕಿ ವಿದ್ಯಾ ಪಾಟೀಲ ದೂರಿದರು.

‘ಸರ್ಕಾರ ಪರಿಹಾರ ನೀಡುತ್ತದೆಯೋ ಇಲ್ವೋ ಗೊತ್ತಿಲ್ಲ. ಆದರೆ, ಹಣದಿಂದ ಅವರ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ. ನಮ್ಮ ಸಂಘಟನೆಯಿಂದ ಮೃತರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಕೊಡಲಾಗುವುದು. ಮುಂದೆ ಅವರ ಮಗಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡಲಾಗುವುದು’ ಎಂದರು.

ನಾಳೆ ವಿಧಾನಸೌಧ ಮುತ್ತಿಗೆ: ದಾಬಸ್‌ಪೇಟೆಯಿಂದ ನೆಲಮಂಗಲ ಮಾರ್ಗವಾಗಿ ಪಾದಯಾತ್ರೆ ಬೆಂಗಳೂರು ತಲುಪಲಿದೆ. ಇದೇ 30ರಂದು ಪಾದಯಾತ್ರೆ ಮೂಲಕವೇ ವಿಧಾನಸೌಧಕ್ಕೆ ಬಂದು ಮುತ್ತಿಗೆ ಹಾಕಲು ಮಹಿಳೆಯರು ತೀರ್ಮಾನಿಸಿದ್ದಾರೆ.

ಮಲ್ಲೇಶ್ವರದಿಂದ ಮೆಜೆಸ್ಟಿಕ್‌ಗೆ ಬರಲಿರುವ ಮಹಿಳೆಯರನ್ನು, ಆನಂದರಾವ್ ವೃತ್ತ ಅಥವಾ ಸ್ವಾತಂತ್ರ್ಯ ಉದ್ಯಾನ ಬಳಿಯೇ ತಡೆದು ನಿಲ್ಲಿಸಲು ಸಂಬಂಧಪಟ್ಟ ಡಿಸಿಪಿಗಳಿಗೆ ಹಿರಿಯ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

‘ವಿಧಾನಸೌಧ ಹೊರತುಪಡಿಸಿ ಬೇರೆ ಎಲ್ಲಿಯಾದರೂ ಮಹಿಳೆಯರು ಪ್ರತಿಭಟನೆ ನಡೆಸುವುದಾದರೆ ಭದ್ರತೆ ನೀಡಲು ನಾವು ಸಿದ್ಧರಿದ್ದೇವೆ. ಜೊತೆಗೆ ಪಾದಯಾತ್ರೆ ನೇತೃತ್ವ ವಹಿಸಿರುವ ಮುಖಂಡರ ಜತೆ ಮುಖ್ಯಮಂತ್ರಿ ಭೇಟಿಗೆ ಪ್ರಯತ್ನಿಸಲಿದ್ದೇವೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಪಾದಯಾತ್ರೆಯಲ್ಲಿ ಹೊರಟಿದ್ದ ಮಹಿಳೆಯರಿಗೆ ರಕ್ಷಣೆ ನೀಡದ ಬೆಂಗಳೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಬೇಗೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಅಪಘಾತದಲ್ಲಿ ಮೃತಪಟ್ಟ ರೇಣುಕಮ್ಮ ಅವರ ಸಾವಿನ ಬಗ್ಗೆ ಸಂಬಂಧಿಕರನ್ನು ಬೆದರಿಸಿ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ. ಹೋರಾಟವನ್ನು ಹತ್ತಿಕ್ಕಲು ಸಂಘಟಕರ ಮೇಲೂ ಒತ್ತಡ ಹೇರಲಾಗುತ್ತಿದೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ಡಿಸಿ, ಎಸ್ಪಿ ಭೇಟಿ: ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ ಹಾಗೂ ಜಿಲ್ಲಾ ಎಸ್ಪಿ ಶಿವಕುಮಾರ್‌ ಸ್ಥಳಕ್ಕೆ ಬಂದು ಮಹಿಳೆಯರ ಮನವೋಲಿಸಲು ಯತ್ನಿಸಿದರು. ಪಾದಯಾತ್ರೆಯುದ್ದಕ್ಕೂ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.