ADVERTISEMENT

ಎಲ್ಲ ಜಿಲ್ಲೆಯಲ್ಲೂ ನರ್ಸಿಂಗ್‌ ಕಾಲೇಜು ಸ್ಥಾಪನೆ: ಡಿಸಿಎಂ ಅಶ್ವತ್ಥನಾರಾಯಣ

ಭೀಮನಕುಪ್ಪೆಯಲ್ಲಿ ₹ 600 ಕೋಟಿ ವೆಚ್ಚದಲ್ಲಿ ಆರೋಗ್ಯ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:00 IST
Last Updated 31 ಜನವರಿ 2020, 20:00 IST
   

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಕಾಲೇಜುಗಳು ಇಲ್ಲದ ಕಡೆ ಜಿಲ್ಲಾ ಆಸ್ಪತ್ರೆಗಳಲ್ಲಿ ನರ್ಸಿಂಗ್ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ಕಾಲೇಜು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಬಜೆಟ್‌ ಪೂರ್ವ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೇ 100ರಷ್ಟು ಉದ್ಯೋಗ ಕೊಡುವ ನರ್ಸಿಂಗ್‌ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಷಯದಲ್ಲಿ ಪದವಿ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಹೀಗಾಗಿ ಇದನ್ನು ಆದ್ಯತೆಯ ಮೇಲೆ ಜಾರಿಗೆ ತರಲು ನಿರ್ಧರಿಸಲಾಗಿದೆ’ ಎಂದರು.

ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬೆಂಗಳೂರು, ಮೈಸೂರು, ವಿಜಯನಗರ ಮತ್ತು ಕಿಮ್ಸ್‌ಗಳಲ್ಲಿ ಜೀರಿಯಾಟ್ರಿಕ್‌ (ವೃದ್ಧರ ಆರೈಕೆ ಕೇಂದ್ರ) ತೆರೆಯಲಾಗುವುದು. ಬೆಂಗಳೂರು, ಮೈಸೂರು, ವಿಜಯನಗರ, ಕರ್ನಾಟಕ ಮತ್ತು ಶಿವಮೊಗ್ಗ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್‌ ಕೇಂದ್ರಗಳನ್ನು ತೆರೆಯಲಾಗುವುದು. ಕಟ್ಟಡ ಇಲ್ಲದ ಶಿವಮೊಗ್ಗಕ್ಕೆ ₹ 50 ಕೋಟಿ ಹಾಗೂ ಇತರೆಡೆಗೆ ತಲಾ ₹ 40 ಕೋಟಿ ಒದಗಿಸಲಾಗುವುದು ಎಂದರು.

ADVERTISEMENT

ರಾಮನಗರದಲ್ಲಿ ₹ 500 ಕೋಟಿ ವೆಚ್ಚದಲ್ಲಿ ಆರೋಗ್ಯ ನಗರ ನಿರ್ಮಾಣ ನಿಶ್ಚಿತ. ಭೀಮನಕುಪ್ಪೆಯಲ್ಲಿ ₹ 600 ಕೋಟಿ ವೆಚ್ಚದಲ್ಲಿ ಆರೋಗ್ಯಕ್ಕೆ ಸಂಬಂಧಿತ ಸಂಶೋಧನೆ, ಅನ್ವೇಷಣೆ, ಇನ್‌ಕ್ಯುಬೇಟರ್‌, ಬಯೊಟೆಕ್‌, ಇತರ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವಿಸ್ತೃತ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಮುಂದಾಗಿದ್ದು, ತಲಾ ₹ 2.5 ಕೋಟಿ ವೆಚ್ಚದಲ್ಲಿ ಮೊಳಕಾಲ್ಮೂರು, ಶಿಕಾರಿಪುರ, ಮಾಗಡಿ, ರಾಯಚೂರು, ಯಾದಗಿರಿಗಳಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವ ಚರ್ಚೆ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.