ADVERTISEMENT

ನವೀನ್ ಪಾರ್ಥಿವ ಶರೀರ ತರಲು ಸರ್ವಪ್ರಯತ್ನ: ಸಚಿವ  ಜೈಶಂಕರ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 12:20 IST
Last Updated 2 ಮಾರ್ಚ್ 2022, 12:20 IST
   

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಮಂಗಳವಾರ ಬೆಳಿಗ್ಗೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಎಲ್ಲ ಪ್ರಯತ್ನ ಮಾಡುವುದಾಗಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭರವಸೆ‌ ನೀಡಿದ್ದಾರೆ.

ಬುಧವಾರ ಸಂಜೆ ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಅವರು ಈ ಕುರಿತ ಸಲ್ಲಿಸಿದ ಮನವಿ‌ ಸ್ವೀಕರಿಸಿದ ಅವರು, ಉಕ್ರೇನ್ ನ ಪೂರ್ವ ಭಾಗದಲ್ಲಿ ಸಿಲುಕಿರುವ ದೇಶದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಯತ್ನಿಸಲಾಗುವುದು ಎಂದರು.

ನವೀನ್ ಗೆ ರಷ್ಯಾ ಪಡೆಯ ಶೆಲ್ ನೇರವಾಗಿ ತಗುಲಿಲ್ಲ. ಬದಲಿಗೆ, ಶೆಲ್ ದಾಳಿಯ ರಭಸಕ್ಕೆ ಸಿಡಿದ ಕಬ್ಬಿಣದ‌ ಚೂರು ಅವರ ತಲೆಗೆ ಬಡಿದಿರುವ ಸಾಧ್ಯತೆ ಇದೆ. ಅವರ ಮೃತದೇಹ ಸುರಕ್ಷಿತವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ಸಂರಕ್ಷಿಸಿ ಇಡಲಾಗಿರುವ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಅಗತ್ಯವಿರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾಗಿ ಉದಾಸಿ ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಹಾರ್ಕೀವ್ ನಗರದಲ್ಲಿ ಸಿಲುಕಿರುವ‌ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳ ವಿವರವಾದ ಮಾಹಿತಿಯನ್ನು ಸಚಿವರಿಗೆ ಸಲ್ಲಿಸಲಾಗಿದ್ದು, ಅವರೆಲ್ಲರಿಗೂ ಅಗತ್ಯ ಆಹಾರ ಮತ್ತಿತರ ಸಲಕರಣೆ ಒದಗಿಸುವಂತೆಯೂ ಕೋರಲಾಗಿದೆ ಎಂದು ಅವರು ಹೇಳಿದರು.

ಉಕ್ರೇನ್ ನ ಪಶ್ಚಿಮ ಭಾಗಕ್ಕೆ ಎಲ್ಲ ವಿದ್ಯಾರ್ಥಿಗಳನ್ನೂ ಸುರಕ್ಷಿತವಾಗಿ ಕರೆತರಲು ಅಗತ್ಯ ವಾಹನ ಸೌಲಭ್ಯ ಒದಗಿಸುವಂತೆಯೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾಗಿ ಸಚಿವರು ತಿಳಿಸಿದ್ದಾಗಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.