ADVERTISEMENT

ಸರ್ವಪಕ್ಷಗಳ ಸಭೆ ಇಂದು- ನ್ಯಾ. ನಾಗಮೋಹನದಾಸ್‌ ಆಯೋಗದ ವರದಿ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 21:09 IST
Last Updated 6 ಅಕ್ಟೋಬರ್ 2022, 21:09 IST

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸರ್ವಪಕ್ಷಗಳ ಸಭೆ ನಡೆಯಲಿದೆ. ಜನಸಂಖ್ಯೆಗೆ ಅನು ಗುಣವಾಗಿ ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಿಸಬೇಕೆಂಬ ಹೋರಾಟದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನದಾಸ್‌ ಆಯೋ ಗದ ವರದಿ ಕುರಿತು ಚರ್ಚೆ ನಡೆಯಲಿದೆ.

ಇ‌ಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಶಿಫಾರಸುಗಳ ಜಾರಿಗೆ ಸರ್ವಪಕ್ಷ ಸಭೆಯಲ್ಲಿ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ಭಾರತ್‌ ಜೋಡೊ ಪಾದಯಾತ್ರೆ ನಡುವೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ಪಂಗಡದವರಿಗೆ ಶೇ 3 ಸೇರಿ ಶೇ 18ರಷ್ಟು ಮೀಸಲಾತಿ ಇದೆ. ಕೇಂದ್ರ, ರಾಜ್ಯ ಸರ್ಕಾರದ ಮೀಸಲಾತಿ ನಡುವೆ ಶೇ 4.5ರಷ್ಟು ವ್ಯತ್ಯಾಸವಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಲ್ಲವೆಂದು ಹೋರಾಟ ನಡೆದಿದೆ’ ಎಂದರು.

ADVERTISEMENT

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಆಯೋಗದ ಶಿಫಾರಸಿನಂತೆ ಪರಿಶಿಷ್ಟ ಜಾತಿಗಳಿಗೆ ಶೇ 17, ಪಂಗಡದವರಿಗೆ ‌‌ಶೇ 7ರಷ್ಟು ಮೀಸಲಾತಿ ನೀಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಯೋಗ ವರದಿ ನೀಡಿದೆ. ಸರ್ಕಾರದ ನಡೆ ವಿರುದ್ಧ ವಾಲ್ಮೀಕಿ ಮಠದ ಸ್ವಾಮೀಜಿ ಧರಣಿ ಆರಂಭಿಸಿದ್ದಾರೆ’ ಎಂದರು.

‘ಮೀಸಲಾತಿ ಹೆಚ್ಚಳ ಕುರಿತು ಸದನದಲ್ಲಿ ನಿರ್ಧಾರ ಕೈಗೊಂಡು, ಕೇಂದ್ರಕ್ಕೆ ಕಳುಹಿಸಿ 15 ದಿನದೊಳಗೆ ಸಂವಿಧಾನದ ತಿದ್ದುಪಡಿ ಮಾಡುವ ಬಗ್ಗೆ ಪರಿಶೀಲಿಸುವಂತೆ ಶುಕ್ರವಾರದ ಸಭೆಯಲ್ಲಿ ಒತ್ತಾಯಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.