ADVERTISEMENT

ಮತದಾರರ ಮಾಹಿತಿ ಕಳವು ಆರೋಪ: ದತ್ತಾಂಶ ಮಾರಾಟದ ‘ಚಿಲುಮೆ’

ನಿರ್ದೇಶಕ ಕೃಷ್ಣೇಗೌಡ ಬಂಧನ l ‘ಪ್ರಭಾವಿ’ಯ ಚೆಕ್, ಲೆಟರ್‌ಹೆಡ್ ವಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 19:22 IST
Last Updated 19 ನವೆಂಬರ್ 2022, 19:22 IST
   

ಬೆಂಗಳೂರು: ಮತದಾರರ ದತ್ತಾಂಶ ಕಳವಿನ ಆರೋಪ ಹೊತ್ತಿರುವ ‘ಚಿಲುಮೆ’ ಸಂಸ್ಥೆ ಬೆನ್ನು ಹತ್ತಿರುವ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದ್ದು, ಈ ಸಂಸ್ಥೆಯು ದತ್ತಾಂಶ ಮಾರಾಟಕ್ಕೆ ಮುಂದಾಗಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಚಿಲುಮೆ ಸಂಸ್ಥೆಯ ವಿವಿಧ ಕಚೇರಿಗಳ ಶೋಧ ನಡೆಸಿದಾಗ ಪ್ರಭಾವಿ ರಾಜಕಾರಣಿಯೊಬ್ಬರ ಲೆಟರ್ ಹೆಡ್‌, ಖಾಲಿ ಚೆಕ್‌ಗಳು, ನೋಟು ಎಣಿಸುವ ಯಂತ್ರಗಳು, ಐಎಎಸ್–ಕೆಎಎಸ್ ಅಧಿಕಾರಿಗಳ ವಿಸಿಟಿಂಗ್ ಕಾರ್ಡ್‌ಗಳು, ಬಿಬಿಎಂಪಿ ಅಧಿಕಾರಿಗಳ ಹೆಸರಿನ ಗುರುತಿನ ಚೀಟಿಗಳು ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಕರಣ ದಾಖಲಾದ ಬಳಿಕ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆದಿದೆ. ಸಂಸ್ಥೆಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ನಿರ್ದೇಶಕ ಕೃಷ್ಣೇಗೌಡ ಅಲಿಯಾಸ್‌ ಕೆಂಪೇಗೌಡ ಅವರನ್ನು ಬಂಧಿಸಲಾಗಿದೆ. ರವಿಕುಮಾರ್ ಅವರಪತ್ನಿ ಐಶ್ವರ್ಯಾ ಹಾಗೂ ರವಿ ಅವರ ಪೋಷಕರು, ಕೃಷ್ಣೇಗೌಡರ ಪತ್ನಿ ಶ್ರುತಿ ಹಾಗೂ ಆಕೆಯ ಪೋಷಕರನ್ನು ಹಲಸೂರು ಗೇಟ್‌ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದರು.

ADVERTISEMENT

‘ಐಶ್ವರ್ಯಾ ಮತ್ತು ಶ್ರುತಿ ಅವರು ಸಂಸ್ಥೆಯ ನಿರ್ದೇಶಕರಾಗಿದ್ದು, ಇಬ್ಬರಿಗೂ ಸಂಸ್ಥೆಯ ವ್ಯವಹಾರಗಳು ತಿಳಿದಿದ್ದವು. ಎಫ್‌ಐಆರ್ ದಾಖಲಾದ ಮೇಲೆದಾಖಲೆಗಳನ್ನು ಬಚ್ಚಿಡಲು ಟಿ.ಬೇಗೂರಿನಲ್ಲಿರುವ ತೋಟದ ಮನೆಗೆ ಒಯ್ಯುತ್ತಿದ್ದಾಗ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವಹಿವಾಟಿನ ಸಾಕ್ಷ್ಯ: ಚಿಲುಮೆ ಸಂಸ್ಥೆಯು ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹಿಸಿತ್ತು. ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದವರ ವಿವರ, ಮುಂದಿನ ಚುನಾವಣೆಯಲ್ಲಿ ಮತದಾರ ಬೆಂಬಲಿಸುವ ಪಕ್ಷದ ಮಾಹಿತಿಯನ್ನೂ ಸಂಸ್ಥೆ ಕಲೆ ಹಾಕಿತ್ತು. ಆ ಮಾಹಿತಿಯ ಮಾರಾಟಕ್ಕೆ ಮಾಜಿ ಶಾಸಕರೊಬ್ಬರೂ ಸೇರಿ ಹಲವರನ್ನು ಇ–ಮೇಲ್‌ ಮೂಲಕ ಸಂಪರ್ಕಿಸಿರುವ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಈ ಸಂಸ್ಥೆಯ ಸಿಬ್ಬಂದಿ ಬಸವನಗುಡಿಯ ಬಾಲಾಜಿ ಎಂಬುವವರ ಮನೆಗೆ ಸಮೀಕ್ಷೆಗೆ ತೆರಳಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದೂ ಮೂಲಗಳು ಹೇಳಿವೆ.

ಆ ವೇಳೆ ಗಲಾಟೆ ಸಹ ನಡೆದಿತ್ತು. ಆ ದೃಶ್ಯ ತನಿಖಾಧಿಕಾರಿಗಳ ಕೈಸೇರಿದೆ ಎಂದಿವೆ.

‘ಸಂಸ್ಥೆಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಿರುವುದು, ಹಣ ಪಡೆದು ಮತದಾರರ ವಿವರ ನೀಡಿರುವುದು, ಇ–ಮೇಲ್‌ ಮೂಲಕ ಜನಪ್ರತಿನಿಧಿಗಳ ಸಂಪರ್ಕಕ್ಕೆ ಪ್ರಯತ್ನಿಸಿರುವುದು ತನಿಖೆಯಿಂದ ಪತ್ತೆಯಾಗಿದೆ. ಎಸ್‌ಬಿಐ, ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಸಂಸ್ಥೆಗೆ ಸೇರಿದ ಖಾತೆಗಳಿದ್ದವು. ಎಸಿಪಿ ನಾರಾಯಣಸ್ವಾಮಿ ನೇತೃತ್ವದ ತನಿಖಾ ತಂಡವು ಬ್ಯಾಂಕ್‌ ವ್ಯವಹಾರದ ಪರಿಶೀಲನೆ ನಡೆಸಿದೆ. ರಾಜಕಾರಣಿಗಳೂ ಸೇರಿ ಹಲವರು ಈ ಖಾತೆಗಳಿಗೆ ಹಣ ಹಾಕಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಬಂಧಿಸಲಾಗಿದ್ದ ರೇಣುಕಾ ಪ್ರಸಾದ್ ಹಾಗೂ ಧರ್ಮೇಶ್ ಅವರನ್ನು 37ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಶನಿವಾರ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿದೆ.

ತನಿಖೆಗೆ ಸಹಕಾರ ನೀಡದಿದ್ದರೆ ಬಂಧನ: ‘ತನಿಖೆಗೆಐಶ್ವರ್ಯಾ ಸಹಕರಿಸುತ್ತಿದ್ದಾರೆ. ಸಹಕಾರ ನೀಡದಿದ್ದರೆ ಅವರನ್ನೂ ಬಂಧಿಸುತ್ತೇವೆ. ರವಿ ಕುಮಾರ್‌ ಬಂಧನಕ್ಕೆ ತಂಡ ರಚಿಸಲಾಗಿದೆ’ ಎಂದು ಡಿಸಿಪಿ ಶ್ರೀನಿವಾಸಗೌಡ ತಿಳಿಸಿದರು.

ಸಿಐಡಿಗೆ ವರ್ಗಾವಣೆ ಸಾಧ್ಯತೆ
‘ಚಿಲುಮೆ’ ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸುವ ಸಾಧ್ಯತೆಯಿದೆ. ಆ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಸದ್ಯಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಪಟ್ಟು
ಚಿಲುಮೆ ಜತೆಗೂಡಿ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್‌ ಪಕ್ಷವು ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಮುಖಂಡರ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು. ಮತದಾರರ ಮಾಹಿತಿ ಕಳವು ಮತ್ತು ದುರ್ಬಳಕೆಯಲ್ಲಿ ಭಾಗಿಯಾದವರ ವಿರುದ್ಧ ಭಾರತೀಯ ದಂಡಸಂಹಿತೆ, ಪ್ರಜಾಪ್ರತಿನಿಧಿ ಕಾಯ್ದೆ ಸೇರಿದಂತೆ ಸೂಕ್ತ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

‘ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸುವ ಮೊದಲೇ ಈ ಕೆಲಸ ಮಾಡಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಖಾಸಗಿ ಸಂಸ್ಥೆ ಮನವಿ ಸಲ್ಲಿಸಿದ ಮರುದಿನವೇ ಬಿಬಿಎಂಪಿ ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿ, ಅಶ್ವತ್ಥನಾರಾಯಣ ಹಾಗೂ ತುಷಾರ್‌ ಗಿರಿನಾಥ್‌ ಸೇರಿ ನಡೆಸಿರುವ ಸಂಚಿನಂತೆ ಎಲ್ಲವೂ ನಡೆದಿದೆ. ಈ ಮೂವರ ಜತೆಗೆ ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ ವಿರುದ್ಧವೂ ತನಿಖೆಗೆ ಬಿಜೆಪಿ ಆಗ್ರಹ
‘ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗವಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿದ್ದೇ ಕಾಂಗ್ರೆಸ್‌ ಪಕ್ಷದ ಸರ್ಕಾರ. 2013ರಿಂದ ಈವರೆಗೆ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ತನಿಖೆ ನಡೆಸಬೇಕು’ ಎಂದು ಕೇಂದ್ರ ಚುನಾವಣಾ ಆಯೋಗವನ್ನು ಬಿಜೆಪಿ ಒತ್ತಾಯಿಸಿದೆ.

ಶಾಸಕರಾದ ಎನ್‌. ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ, ಎಲ್‌.ಎ. ರವಿಸುಬ್ರಹ್ಮಣ್ಯ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರನ್ನು ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

‘2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಮುಖಂಡರು ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಇರುವುದು ಸರಿಯಲ್ಲ. ಅಂತಹ ಹೆಸರುಗಳನ್ನು ಕೈಬಿಟ್ಟಿರುವುದನ್ನೇ ಕಾಂಗ್ರೆಸ್‌ ಪಕ್ಷ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದುರುದ್ದೇಶದಿಂದ ಆರೋಪ ಮಾಡುತ್ತಿರುವ ಕುರಿತೂ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.