ADVERTISEMENT

ಲಂಚ ಪಡೆದ ಆರೋಪ: ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಎಸಿಬಿಗೆ ದೂರು

ಯಂತ್ರೋಪಕರಣ ಸಹಾಯಧನದಲ್ಲಿ ₹ 210 ಕೋಟಿ ಲಂಚದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 1:38 IST
Last Updated 8 ಸೆಪ್ಟೆಂಬರ್ 2021, 1:38 IST
ಕೃಷಿ ಸಚಿವ ಬಿ.ಸಿ. ಪಾಟೀಲ
ಕೃಷಿ ಸಚಿವ ಬಿ.ಸಿ. ಪಾಟೀಲ   

ಬೆಂಗಳೂರು: ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯ್ತಿ ದರದಲ್ಲಿ ವಿತರಿಸುವ ಯಂತ್ರೋಪಕರಣಗಳ ಖರೀದಿಯಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ ₹ 210 ಕೋಟಿ ಮೊತ್ತದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಆ್ಯಂಟಿ ಕರಪ್ಷನ್‌ ಫೋರ್ಸ್‌ (ಎಸಿಎಫ್‌) ಕರ್ನಾಟಕ ಸಂಘಟನೆಯ ಅಧ್ಯಕ್ಷ ಎನ್‌. ಕೃಷ್ಣಮೂರ್ತಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ.

‘ತುಂತುರು ನೀರಾವರಿಗೆ ಬಳಸುವ ಸ್ಪ್ರಿಂಕ್ಲರ್‌, ಡೀಸೆಲ್‌ ಪಂಪ್‌ಸೆಟ್‌, ಪವರ್‌ ಸ್ಪ್ರೇಯರ್‌, ಬ್ಯಾಟರಿ ಚಾಲಿತ ಬ್ಯಾಕ್‌ ಸ್ಪ್ರೇಯರ್‌ ಸೇರಿದಂತೆ ಸಹಾಯಧನ ಯೋಜನೆಗಳ ಅಡಿಯಲ್ಲಿ ವಿತರಿಸಲು ಯಂತ್ರೋಪಕರಣ ಖರೀದಿಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಯಂತ್ರೋಪಕರಣಗಳನ್ನು ಖರೀದಿ ಮಾಡದೆ ನಕಲಿ ಬಿಲ್‌ ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಪ್ರಭಾವಿ ನಾಯಕರು ಬೇನಾಮಿ ಹೆಸರಿನಲ್ಲಿ ಹೊಂದಿರುವ ಕಂಪನಿಗಳಿಂದ ಯಂತ್ರೋಪಕರಣ ಖರೀದಿಸಿ, ಅಕ್ರಮ ಎಸಗಲಾಗಿದೆ’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿಗೆ ಮಂಗಳವಾರ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

‘ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ದಿವಾಕರ್‌ ಮತ್ತು ಸಚಿವರು ಸೇರಿಕೊಂಡು ಅಕ್ರಮ ಎಸಗಿದ್ದಾರೆ. ದಿವಾಕರ್‌ ಕೂಡ ಬೇನಾಮಿ ಕಂಪನಿ ಹೊಂದಿರುವ ಆರೋಪವಿದೆ. ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ಈ ಅಧಿಕಾರಿ, ಬೃಹತ್‌ ಮೊತ್ತದ ಭ್ರಷ್ಟಾಚಾರ ನಡೆಸಿದ್ದಾರೆ. ಶೇಕಡ 50ರಷ್ಟು ಯಂತ್ರೋಪಕರಣಗಳು ಪೂರೈಕೆ ಆಗಿಲ್ಲ. ಆದರೂ, ಬಿಲ್‌ ಪಾವತಿಸಿ ಬೃಹತ್‌ ಪ್ರಮಾಣದ ಲಂಚ ಪಡೆಯಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಮ್ಮ ದೂರಿನಲ್ಲಿ ಆರೋಪಗಳ ಕುರಿತು ಸಚಿವ ಬಿ.ಸಿ. ಪಾಟೀಲ ಮತ್ತು ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ದಿವಾಕರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಪಾಟೀಲ ಅವರು ಕೃಷಿ ಸಚಿವರಾದ ಬಳಿಕ ನಡೆದಿರುವ ಯಂತ್ರೋಪಕರಣ ಖರೀದಿ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು. ಈ ಅವಧಿಯಲ್ಲಿ ಯಂತ್ರೋಪಕರಣ ಪೂರೈಕೆಗೆ ಗುತ್ತಿಗೆ ಪಡೆದಿರುವ ಕಂಪನಿಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಬೇಕು. ಈ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನೂ ವಶಕ್ಕೆ ಪಡೆಯಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರದ ಆರೋಪ ಮತ್ತು ಎಸಿಬಿಗೆ ನೀಡಿರುವ ದೂರಿನ ಕುರಿತು ಬಿ.ಸಿ. ಪಾಟೀಲ ಅವರ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.