ADVERTISEMENT

ಗುತ್ತಿಗೆದಾರರಿಗೆ ಸಹಕರಿಸದ ಕಾರಣ ಲಂಚದ ಆರೋಪ: ಸಚಿವ ಮುನಿರತ್ನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 9:11 IST
Last Updated 26 ಆಗಸ್ಟ್ 2022, 9:11 IST
   

ಕೋಲಾರ: ‘ಗುತ್ತಿಗೆದಾರರಿಗೆ ಸಹಕರಿಸದ ಕಾರಣ ನನ್ನ ಮೇಲೆ ಲಂಚದ ಆರೋಪ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

‘ಕೋಲಾರ ಜಿಲ್ಲೆಯಲ್ಲಿ ಈಚೆಗೆ ಡಾಂಬರೀಕರಣ ಆಗಿರುವ ರಸ್ತೆಗಳ ಗುಣಮಟ್ಟ ಪರಿಶೀಲನೆ ಮಾಡಲು ತಿಳಿಸಿದ್ದೆ. ಆಗ ಕೆಲ ಗುತ್ತಿಗೆದಾರರು, ‘ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕೆಲ ಲೋಪಗಳು ಕಂಡುಬರುತ್ತವೆ. ಸಚಿವರು ಸಹಕರಿಸಬೇಕು’ ಎಂಬುದಾಗಿ ನನ್ನನ್ನು ಕೋರಿದ್ದರು’ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ADVERTISEMENT

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ಕೋಲಾರ ಜಿಲ್ಲೆಯ ಬಿಜೆಪಿ ನಿಯೋಗ ಭೇಟಿ

ಈ ನಡುವೆ ಕೋಲಾರ ಜಿಲ್ಲೆಯ ಬಿಜೆಪಿ ನಿಯೋಗ ಬೆಂಗಳೂರಿನ ಮುನಿರತ್ನ ನಿವಾಸಕ್ಕೆ ತೆರಳಿ ಚರ್ಚಿಸಿದೆ.
ನಿಯೋಗದಲ್ಲಿ ಮಾಜಿ ಸಚಿವ ಆರ್‌.ವರ್ತೂರು ಪ್ರಕಾಶ್‌, ಮಾಜಿ ಶಾಸಕ ಸಂಪಂಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.