ಗೋವಿಂದ ಕಾರಜೋಳ
ವಿಜಯಪುರ: ‘ಆಲಮಟ್ಟಿ ಜಲಾಶಯದಿಂದ ಕೊಲ್ಹಾಪುರ, ಸಾಂಗ್ಲಿ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುತ್ತಿದೆ ಎಂಬ ಮಹಾರಾಷ್ಟ್ರದ ಆತಂಕದಲ್ಲಿ ಯಾವುದೇ ಹುರುಳಿಲ್ಲ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಲಮಟ್ಟಿ ಜಲಾಶಯ ನಿರ್ಮಾಣ ಪೂರ್ವದಲ್ಲೂ ಅಂದರೆ 1969ಕ್ಕಿಂತ ಮೊದಲೇ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಪ್ರತಿ ವರ್ಷ ಮಳೆಗಾಲದ ವೇಳೆ ಪ್ರವಾಹ ಉಂಟಾಗುತ್ತಿತ್ತು ಎಂಬುದು ದಾಖಲೆಗಳಿಂದ ತಿಳಿದುಬರುತ್ತಿದೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರ ಸರ್ಕಾರವೇ ದಶಕದ ಈಚೆಗೆ ನೀರಾವರಿ, ತಾಂತ್ರಿಕ ತಜ್ಞ ವದನೆಯರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಿದ್ದು, ಕರ್ನಾಟಕದ ಆಲಮಟ್ಟಿ, ಹಿಪ್ಪರಗಿ ಜಲಾಶಯಗಳಲ್ಲಿ ನೀರು ಸಂಗ್ರಹಕ್ಕೂ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವೈಜ್ಞಾನಿಕ ವರದಿ ನೀಡಿದ್ದಾರೆ. ಹೀಗಿದ್ದೂ ಮಹಾರಾಷ್ಟ್ರ ಸರ್ಕಾರ ವಿವಿಧ ವೇದಿಕೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ವಿರೋಧ ವ್ಯಕ್ತಪಡಿಸಿ, ಸುಳ್ಳು ತಕರಾರು ತೆಗೆದು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಖಂಡನೀಯ’ ಎಂದರು.
‘ಆಲಮಟ್ಟಿ ಜಲಾಶಯವನ್ನು ಈಗಿರುವ 519ರಿಂದ 524 ಮೀಟರ್ ಎತ್ತರಿಸುವುದು ಈಗಾಗಲೇ ನಿರ್ಧಾರವಾಗಿರುವ ವಿಷಯ. ಈ ಕುರಿತು ಮಹಾರಾಷ್ಟ್ರ ಸರ್ಕಾರ ವಿನಃ ಕಾರಣ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ’ ಎಂದರು.
‘ಕೃಷ್ಣಾ ನ್ಯಾಯಾಧೀಕರಣ 2ರ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಅವರು ತಮ್ಮ ಅಂತಿಮನಲ್ಲಿ ಆಲಮಟ್ಟಿ ಆಣೆಕಟ್ಟೆ ಎತ್ತರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ, ಈಗ ತಗಾದೆ ತೆಗೆಯುವುದರಲ್ಲಿ ಅರ್ಥವಿಲ್ಲ’ ಎಂದರು.
‘2010ರಲ್ಲೇ ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು ಬಂದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಹಾರಾಷ್ಟ್ರದ ವಿಚಾರಣೆ ನಡೆದಿದೆ. ಕೇವಲ ಆಂಧ್ರ ಪ್ರದೇಶದ ವಿಚಾರಣೆ ಬಾಕಿ ಇದೆ. ಶೀಘ್ರದಲ್ಲೇ ಅಂತಿಮ ಆದೇಶ ಬರಲಿದ್ದು, ಗೆಜೆಟ್ ನೋಟಿಫಿಕೇಶ್ ಹೊರಡಿಸಲಾಗುತ್ತದೆ’ ಎಂದು ಹೇಳಿದರು.
‘ಕರ್ನಾಟಕ ಸರ್ಕಾರ ಮಹಾರಾಷ್ಟ್ರದ ಈ ತಕಾರರಿಗೆ ತಕ್ಷಣವೇ ಸ್ಪಷ್ಟನೆ ನೀಡಬೇಕು ಹಾಗೂ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಎತ್ತರಿಸುವುದರಿಂದ ಮುಳುಗಡೆ ಆಗುವ 20 ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಬೇಕು, ಮುಳುಗಡೆಯಾಗುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಅಧಿಸೂಚನೆ ಹೊರಡಿಸಲಾಗದು:
‘ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಅಂತಿಮ ತೀರ್ಪು ಬಾರದೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಆಗದು’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ರಾಜ್ಯ ಸರ್ಕಾರಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ವಿವಾದ ಬಗೆಹರಿಸಿಕೊಳ್ಳಲು ಯಾವುದೇ ಪ್ರಯತ್ನ ನಡೆಸಿಲ್ಲ, ಕುಂಟು ನೆಪ ಹೇಳುವುದನ್ನು ರಾಜ್ಯ ಸರ್ಕಾರ ಬಿಡಬೇಕು’ ಎಂದು ಆಗ್ರಹಿಸಿದರು.
‘ಆಲಮಟ್ಟಿ ಜಲಾಶಯದ ಎತ್ತರವನ್ನು ಹಂತ, ಹಂತವಾಗಿ ಏರಿಸುವ ರಾಜ್ಯ ಸರ್ಕಾರದ ಉದ್ದೇಶ ಸರಿಯಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣವೇ ಒಮ್ಮೆಗೆ 524 ಮೀಟರ್‌ಗೆ ಎತ್ತರಿಸಬೇಕು. ಇದರಿಂದ ರಾಜ್ಯಕ್ಕೆ 130 ಟಿಎಂಸಿ ಅಡಿ ನೀರು ಸಿಗಲಿದೆ, 15 ಲಕ್ಷ ಹೆಕ್ಟೇರ್‌ಗೆ ನೀರು ಲಭಿಸಲಿದೆ’ ಎಂದರು.
‘ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಅಂತರರಾಜ್ಯಗಳ ನಡುವೆ ವಿವಾದ ಇರುವುದರಿಂದ ಕೇಂದ್ರ ಸರ್ಕಾರ ಯುಕೆಪಿಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಬಾರದು. ವಿವಾದ ಇತ್ಯರ್ಥವಾದ ಬಳಿಕ ಕೇಂದ್ರದಿಂದ ಯೋಜನೆಗೆ ಹಣಕಾಸು ನೆರವು ಕೇಳಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.