ADVERTISEMENT

ರಾಜಕೀಯದಲ್ಲೂ ‘ರೆಬೆಲ್‌’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 19:24 IST
Last Updated 24 ನವೆಂಬರ್ 2018, 19:24 IST
ಅಂಬರೀಷ್
ಅಂಬರೀಷ್   

ಬೆಂಗಳೂರು: ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಷ್‌, ರಾಜಕಾರಣಿಯಾದ ಮೇಲೂ ‘ರೆಬೆಲ್‌’ ಗುಣವನ್ನು ಬಿಟ್ಟಿರಲಿಲ್ಲ.

ಸಿನಿಮಾದಿಂದ ರಾಜಕೀಯಕ್ಕೆ ಹೊರಳಿದ್ದ ಅಂಬರೀಷ್‌, ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸಮ್ಮುಖದಲ್ಲಿ 1994ರಲ್ಲಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್ ತೊರೆದಿದ್ದ ಅವರು, ಜನತಾದಳ ಸೇರ್ಪಡೆಗೊಂಡಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಆಯ್ಕೆಯಾದರು. ಗೌಡರ ರಾಜೀನಾಮೆಯಿಂದ ತೆರವಾದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ 1996ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಷ್, ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ವಿರುದ್ಧ ಸೆಣೆಸಿ ಸೋಲು ಕಂಡಿದ್ದರು.

1998 ಲೋಕಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1999ರ ಲೋಕಸಭೆ ಚುನಾವಣೆ ವೇಳೆ, ಜನತಾದಳ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2004ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದ ಅಂಬರೀಷ್‌, ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಚಾರ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಕಚೇರಿಗೆ ಕೂಡ ಪ್ರವೇಶಿಸಿರಲಿಲ್ಲ. ಅಷ್ಟರಲ್ಲೇ ಕಾವೇರಿ ವಿವಾದ ಭುಗಿಲೆದ್ದಿತ್ತು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲಾಗದ ಮಂಡ್ಯ ಜಿಲ್ಲೆ ರಾಜಕಾರಣಿಗಳು ರಾಜೀನಾಮೆ ನೀಡಬೇಕು ಎಂಬ ಆಗ್ರಹ ರೈತರದ್ದಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಅಂಬರೀಷ್‌, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2009ರಲ್ಲಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಂಬರೀಷ್‌, ಜೆಡಿಎಸ್‌ನ ಚೆಲುವರಾಯಸ್ವಾಮಿ ಎದುರು ಸೋಲುಕಂಡಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಚಿತ್ರ ನಟಿ ರಮ್ಯಾ ಪರ ಅಂಬಿ ಪ್ರಚಾರ ಮಾಡಿದ್ದರು. ಇದು ರಮ್ಯಾ ಗೆಲುವಿಗೆ ಕಾರಣವಾಗಿತ್ತು. 2014ರ ಲೋಕಸಭಾ ಚುನಾವಣೆ ಹೊತ್ತಿಗೆ ಅಂಬರೀಷ್ ಆರೋಗ್ಯ ಹದಗೆಟ್ಟಿತ್ತು. ರಮ್ಯಾ ಅವರ ವರ್ತನೆಯಿಂದ ಬೇಸತ್ತಿದ್ದ ಅಂಬರೀಷ್‌, ಪ್ರಚಾರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಪ್ರಚಾರಕ್ಕೆ ಹೋಗದೇ ಇರುವ ಬಗ್ಗೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ಮಂಡ್ಯ ಕಡೆಗೆ ಹೊರಟಿದ್ದ ಅಂಬರೀಷ್, ರಾಮನಗರದಿಂದ ವಾಪಸ್ ಆಗಿದ್ದರು. ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಕೆಲಸ ಮಾಡಿದ್ದರಿಂದಾಗಿ ಕಾಂಗ್ರೆಸ್‌ಗೆ ಸೋಲಾಯಿತು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆದಿತ್ತು.

ಇನ್ನಷ್ಟು ಓದು

2016ರಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಸೌಜನ್ಯಕ್ಕಾದರೂ ತಮ್ಮ ಗಮನಕ್ಕೆ ತರದೇ ಸಚಿವ ಸ್ಥಾನದಿಂದ ಕೈಬಿಟ್ಟಿದ್ದರಿಂದ ಸಿಟ್ಟಾಗಿದ್ದ ಅಂಬರೀಷ್‌, ಕಾಂಗ್ರೆಸ್‌ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆ ಅವರಿಗೆ ಟಿಕೆಟ್ ನೀಡದೇ ಇರಲು ಪಕ್ಷ ನಿರ್ಧರಿಸಿತ್ತು. ಇದರಿಂದ ಆಕ್ರೋಶ ಗೊಂಡಿದ್ದ ಅವರು ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದರು.

ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಸಿಟ್ಟಾಗಿದ್ದ ಅಭಿಮಾನಿಗಳು, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂಬರೀಷ್‌, ‘15 ಜನ ಸಿ.ಎಂ.ಗಳ ಜತೆ ಟೀ ಕುಡಿದಿರೋನು ಅಂಬರೀಷ್‌. ನಾನು ಇವತ್ತಿನಿಂದ ರಾಜಕೀಯ ನೋಡ್ತಿಲ್ಲ. ನನಗೆ ಅವತ್ತಿಂದ ಇವತ್ತಿನ ತನಕ ರಾಜಕೀಯ ಗೊತ್ತು. ಮರ್ಯಾದಸ್ಥರಿಗೆ ರಾಜಕೀಯವಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ..., ರಾಜಕೀಯ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು..., ಕಳ್ಳತನದ ವ್ಯವಹಾರ ಮಾಡೋಂಗಿದ್ರೆ ರಾಜಕೀಯ...’ ಎಂದು ವ್ಯಂಗ್ಯವಾಗಿ ಹೇಳಿದ್ದರು.

‘ಇನ್ಮೇಲೆ ಯಾವುದೇ ಸಮಾರಂಭ; ಅದು, ಇದು ಏನೂ ಇಲ್ಲ. ನಾವೂ ಕರ್ನಾಟಕದಲ್ಲಿ ಎಲ್ಲಾ ಜಾತಿಯವರ, ಎಲ್ಲಾ ಪಕ್ಷದವರ ಅನ್ನ ತಿಂದಿರೋರು... 35 ವರ್ಷ ಜೀವನ ಮಾಡಿದ್ದೀವಿ ಫಸ್ಟ್‌ಕ್ಲಾಸಾಗಿ. ನಾವೇನಾದ್ರು ಜಾತಿ, ಪಕ್ಷ ನೋಡಿದ್ನಾ? ಎಲ್ಲಾರು ಕೊಟ್ಟು ಸಾಕಿರೋರೆ ನನಗೆ... ಏನ್‌ ಕಮ್ಮಿ ಸಾಕಿದ್ದಾರಾ?’ ಎಂದು ಗುಡುಗಿದ್ದರು.

ಸಚಿವರಾಗಿದ್ದಾಗಲೂ ವಿವಾದಾಸ್ಪದ ಹೇಳಿಕೆಯಿಂದ ದೂರ ಉಳಿದಿರಲಿಲ್ಲ. ‘ನಾನು ಡ್ಯಾನ್ಸ್ ಮಾಡಿದಿನಿ, ಸ್ಟೇಜ್‌ನಲ್ಲಿ ಮಾಡಿದಿನಿ, ಸಿನಿಮಾದಲ್ಲಿ ಮಾಡಿದಿನಿ, 350 ಜನ ಹುಡುಗಿರ‌್ನ ಇಟ್ಕೊಂಡಿದಿನಿ, ಏನಿವಾಗ? ಏನ್ಮಾಡಕಾಯ್ತದೆ,’ ಎಂದು ಹೇಳಿದ್ದು ಭಾರಿ ಟೀಕೆಗೆ ಕಾರಣವಾಗಿತ್ತು. ಸಂಪುಟ ದರ್ಜೆಯ ಸಚಿವರ ಈ ರೀತಿಯ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.