ADVERTISEMENT

‘ಆ್ಯಂಬಿಡೆಂಟ್’ ತನಿಖೆ ಸಿಐಡಿಗೆ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 17:38 IST
Last Updated 15 ನವೆಂಬರ್ 2018, 17:38 IST

ಬೆಂಗಳೂರು: ‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣದಲ್ಲಿ ‘ರಾಜಕೀಯ ದ್ವೇಷ’ದ ಆರೋಪ ಕೇಳಿ ಬಂದಿದ್ದರಿಂದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿಸಿಬಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ‘ರಾಜಕೀಯ ಸೇಡಿನಿಂದ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು ಆರೋಪಿಸಿದ್ದರು.

ಇದಕ್ಕೂ ಮುನ್ನ, ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ತನಿಖಾ ತಂಡದಿಂದ ಹೊರಗಿಡಬೇಕು ಎಂದು ರೆಡ್ಡಿ ಪರ ವಕೀಲರು ಹೈಕೋರ್ಟ್‌ ಮೊರೆ ಹೋಗಿದ್ದರು. ‘ದೂರಿನಲ್ಲಿ ಇರುವುದೇ ಬೇರೆ. ನೀವು ತನಿಖೆ ನಡೆಸಿರುವುದೇ ಬೇರೆ’ ಎಂದು ಎಸಿಎಂಎಂ ನ್ಯಾಯಾಲಯ ಕೂಡ ಸಿಸಿಬಿಗೆ ಚಾಟಿ ಬೀಸಿತ್ತು. ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಐಡಿಗೆ ಹೋಗದಂತೆ ತಡೆದಿದ್ದರು: ‘ಸಾಮಾನ್ಯವಾಗಿ ₹ 10 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣಗಳನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗ ತನಿಖೆ ನಡೆಸುತ್ತದೆ. ಅಂತೆಯೇ, ₹ 600 ಕೋಟಿ ವಂಚಿಸಿರುವ ಬಗ್ಗೆ ‘ಆ್ಯಂಬಿಡೆಂಟ್’ ಕಂಪನಿ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಡಿಜಿಪಿ ನೀಲಮಣಿ ರಾಜು ಅವರು ಸಿಐಡಿಗೆ ವರ್ಗಾಯಿಸಲು ಮುಂದಾಗಿದ್ದರು. ಆದರೆ, ಕೆಲ ರಾಜಕೀಯ ಮುಖಂಡರು ‘ಪ್ರಭಾವ’ ಬಳಸಿ ಪ್ರಕರಣ ಸಿಐಡಿಗೆ ಹೋಗದಂತೆ ನೋಡಿಕೊಂಡಿದ್ದರು’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

**

‘ಸೇಡಿನ ರಾಜಕೀಯ ಮಾಡಿಲ್ಲ’

ಬೀದರ್‌: ‘ಸೇಡಿನ ರಾಜಕೀಯ ಮಾಡುತ್ತಿದ್ದೇನೆಂದು ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಅಂತಹ ವ್ಯಕ್ತಿಯ ಪ್ರಶ್ನೆಗೆ ಉತ್ತರ ಕೊಡಲಾರೆ. ನಾನು ಎಂದಿಗೂ ಸೇಡಿನ ರಾಜಕೀಯ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ತನಿಖಾ ಅಧಿಕಾರಿಗಳಿಗೆ ಪರಮಾಧಿಕಾರ ನೀಡಲಾಗಿದೆ. ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪು ಮಾಡಿದ ಯಾವ ಅಧಿಕಾರಿಗೂ ರಕ್ಷಣೆ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆ್ಯಂಬಿಡೆಂಟ್‌ ಪ್ರಕರಣದಲ್ಲಿ₹ 600 ಕೋಟಿ ವಂಚನೆ ಮಾಡಲಾಗಿದೆ ಎಂದು ವಂಚನೆಗೊಳಗಾದವರು ಎಚ್.ಡಿ.ದೇವೇಗೌಡರಿಗೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ₹ 18 ಕೋಟಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿರುವುದಾಗಿ ಅಫಿಡವಿಟ್‌ ಬರೆದುಕೊಟ್ಟು ಈಗ ಹಣ ಮರಳಿಸುವುದಾಗಿ ಹೇಳುತ್ತಿದ್ದಾರೆ. ಕಳ್ಳತನ ಮಾಡಿದವರೆಲ್ಲ ಅಫಿಡವಿಟ್‌ ಸಲ್ಲಿಸಿದರೆ ಅವರಿಗೆ ರಕ್ಷಣೆ ಒದಗಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.