ADVERTISEMENT

ಬಾರದ ಆಂಬುಲೆನ್ಸ್‌: ಕುರಿ ಸಾಗಿಸುವ ವಾಹನ ಏರಿ ಆಸ್ಪತ್ರೆಗೆ ತೆರಳಿದ ಗರ್ಭಿಣಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 12:27 IST
Last Updated 21 ಡಿಸೆಂಬರ್ 2018, 12:27 IST
ಕುರಿ ಸಾಗಿಸುವ ವಾಹನದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬಂದ ಗರ್ಭಿಣಿ ಕಳೆಗೆ ಇಳಿಯಲು ಸಂಬಂಧಿಕರು ನೆರವಾದರು
ಕುರಿ ಸಾಗಿಸುವ ವಾಹನದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬಂದ ಗರ್ಭಿಣಿ ಕಳೆಗೆ ಇಳಿಯಲು ಸಂಬಂಧಿಕರು ನೆರವಾದರು   

ಚಿತ್ರದುರ್ಗ: ಎರಡೂವರೆ ಗಂಟೆ ಕಾಯ್ದರೂ ಆಂಬುಲೆನ್ಸ್‌ ಬಾರದಿರುವುದರಿಂದ ತುಂಬು ಗರ್ಭಿಣಿಯೊಬ್ಬರನ್ನು ಕುರಿ ಸಾಗಣೆ ವಾಹನದಲ್ಲಿ ಶುಕ್ರವಾರ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಗ್ರಾಮದ ಲಕ್ಷ್ಮಕ್ಕೆ ಅವರಿಗೆ ಬೆಳಿಗ್ಗೆ ಹೆರಿಗೆನೋವು ಕಾಣಿಸಿಕೊಂಡಿದೆ. ಪೋಷಕರು ಗರ್ಭಿಣಿಯನ್ನು ಮಾಡದಕೆರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಿರುವುದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲು ಶುಶ್ರೂಷಕಿ ಸಲಹೆ ನೀಡಿದ್ದಾರೆ.

ಕರೆ ಮಾಡಿ ಎರಡೂವರೆ ಗಂಟೆ ಕಳೆದರೂ ಆಂಬುಲೆನ್ಸ್‌ ಸ್ಥಳಕ್ಕೆ ಬಂದಿಲ್ಲ. ಇದರಿಂದ ಅಸಹಾಯಕರಾದ ಲಕ್ಷ್ಮಕ್ಕ ಪತಿ ಮಹಲಿಂಗಪ್ಪ, ಖಾಸಗಿ ವಾಹನಗಳಿಗೆ ಹುಡುಕಾಟ ನಡೆಸಿದ್ದಾರೆ. ಹೆರಿಗೆ ನೋವು ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ಕುರಿ ಸಾಗಣೆಯ ಟೆಂಪೊ ಏರಿದ್ದಾರೆ. ನೇರ ರಸ್ತೆ ಹದಗೆಟ್ಟಿದ್ದರಿಂದ ಎಚ್‌.ಡಿ.ಪುರ ಮಾರ್ಗವಾಗಿ ಸುಮಾರು 35 ಕಿ.ಮೀ ಕ್ರಮಿಸಿ ಆಸ್ಪತ್ರೆ ತಲುಪಿದ್ದಾರೆ.

ADVERTISEMENT

ಕುರಿ ಮಾತ್ರ ನಿಲ್ಲಲು ಸಾಧ್ಯವಿರುಷ್ಟು ಸ್ಥಳಾವಕಾಶವಿರುವ ವಾಹನದಲ್ಲಿ ಗರ್ಭಿಣಿಯೊಂದಿಗೆ ಮೂವರು ಮಹಿಳೆಯರು ಹಾಗೂ ಪತಿ ಸಂಚರಿಸಿದ್ದಾರೆ. ಕುಳಿತುಕೊಳ್ಳಲು ಸಾಧ್ಯವಿರುಷ್ಟು ಅವಕಾಶ ಇಲ್ಲದಿದ್ದರಿಂದ ಮಲಗಿಕೊಂಡೇ ಪ್ರಯಾಣಿಸಿ ಜಿಲ್ಲಾಸ್ಪತ್ರೆ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.