ADVERTISEMENT

ಅಂಬೇಡ್ಕರ್‌ ನಮ್ಮ ಹೃದಯದಲ್ಲಿದ್ದಾರೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 10:31 IST
Last Updated 7 ಡಿಸೆಂಬರ್ 2021, 10:31 IST
 ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಬಿಜೆಪಿ ಕಾರ್ಯಕರ್ತರಾದ ನಾವು ಅಂಬೇಡ್ಕರ್‌ ಅವರನ್ನು ಹೃದಯದಲ್ಲಿ ಇಟ್ಟುಕೊಂಡು ಗೌರವಿಸುವ ಕೆಲಸ ಮಾಡುತ್ತಿದ್ದೇವೆ’ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ವಸತಿ ಸಮುಚ್ಛಯದಲ್ಲಿ ಮಂಗಳವಾರ ರಾಷ್ಟ್ರೀಯ ಮತ್ತು ರಾಜ್ಯ ಎಸ್.ಸಿ ಮೋರ್ಚಾ ಪ್ರಮುಖರ ಜೊತೆ ಸಂವಾದ ನಡೆಸಿದ ಅವರು, ‘ದಲಿತರ ನಮಗೆ ಮತಬ್ಯಾಂಕ್‌ ಅಲ್ಲ. ಅವರು ದೇಶದ ಅಭಿವೃದ್ಧಿಯ ಮತ್ತು ಆಡಳಿತದ ಪಾಲುದಾರರು. ಪ್ರತಿಯೊಬ್ಬರೂ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕು. ಇದಕ್ಕಾಗಿಯೇ ಬಿಜೆಪಿಯು ಅಂಬೇಡ್ಕರ್‌ ಅವರ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದೆ’ ಎಂದು ಹೇಳಿದರು.

ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ನೈಜ ಗೌರವ ಅರ್ಪಿಸುವ ಉದ್ದೇಶದಿಂದಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ದಿವಸ್‌ ಆಚರಣೆ ಮತ್ತು ಪಂಚತೀರ್ಥಗಳ ಅಭಿವೃದ್ಧಿಪಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್‌ ಒಂದು ಕುಟುಂಬದ ಹಿತಾಸಕ್ತಿ ಕಾಪಾಡಲು ನೇತಾಜಿ ಸುಭಾಷ್‌ಚಂದ್ರ ಬೋಸ್‌, ವಲ್ಲಭಬಾಯ್‌ ಪಟೇಲ್‌ ಮತ್ತು ಅಂಬೇಡ್ಕರ್‌ ಅವರನ್ನು ತೆರೆಯ ಮರೆಗೆ ಸರಿಸಲು ಪ್ರಯತ್ನಿಸಿತು ಎಂದು ದೂರಿದರು.

ADVERTISEMENT

ನವೆಂಬರ್‌ 26 ಸಂವಿಧಾನ ದಿನ. ಸಂವಿಧಾನ ಎಂದರೆ ಡಾ.ಅಂಬೇಡ್ಕರ್‌ ಅವರ ಹೆಸರು ಪ್ರಸ್ತಾಪಸಿಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ನ.26 ಅನ್ನು ತೆರೆಮರೆಗೆ ಸರಿಸುವ ಕೆಲಸ ಮಾಡಿದರು. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಜ್ರೋಳ್ಕರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದರು ಎಂದರು.

ಅಂಬೇಡ್ಕರ್‌ ಅವರ ಪಂಚಧಾಮಗಳನ್ನು ಪಂಚತೀರ್ಥ ಎಂದು ಘೋಷಿಸಿ ಅಭಿವೃದ್ಧಿ ಪಡಿಸುವ ಕೆಲಸ ನಡೆದಿದೆ. ಅವರು ಹುಟ್ಟಿದ ಜಾಗ ಮಧ್ಯಪ್ರದೇಶದ ಮಹುವಾ, ಬ್ಯಾರಿಸ್ಟರ್‌ ಪದವಿ ಪಡೆಯುವ ವೇಳೆ ವಾಸವಿದ್ದ ಲಂಡನ್‌ ಮನೆಯನ್ನು ಗುರುತಿಸಿ, ಖರೀದಿಸಿ ಸ್ಮಾರಕವಾಗಿ ಪರಿವರ್ತನೆ, ದೆಹಲಿಯ ಆಲಿಪುರ್ ರಸ್ತೆಯಲ್ಲಿ ಅವರು ಸಂವಿಧಾನಕರ್ತೃವಾಗಿ ವಾಸವಿದ್ದ ಮನೆಯನ್ನು ಸ್ಮಾರಕ, ಕರ್ಮಭೂಮಿ ನಾಗಪುರ ಮತ್ತು ಅಂತ್ಯ ಸಂಸ್ಕಾರ ನಡೆದ ಮುಂಬೈ, ಈ ಐದೂ ಸ್ಥಳಗಳನ್ನು ಪಂಚಧಾಮವಾಗಿ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ಮೋದಿ ಕೈಹಾಕಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.