ADVERTISEMENT

ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ: ಕೇಂದ್ರದ ಕ್ರಮಕ್ಕೆ ರಾಹುಲ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:30 IST
Last Updated 3 ಆಗಸ್ಟ್ 2022, 21:30 IST
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಬುಧವಾರ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭೇಟಿ ನೀಡಿ ರಾಷ್ಟ್ರಧ್ವಜಕ್ಕೆ ಇಸ್ತ್ರೀ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದಾರೆ  – ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಬುಧವಾರ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭೇಟಿ ನೀಡಿ ರಾಷ್ಟ್ರಧ್ವಜಕ್ಕೆ ಇಸ್ತ್ರೀ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದಾರೆ – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ಬೆಂಗೇರಿಯಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಬುಧವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದರು.

ರಾಷ್ಟ್ರಧ್ವಜ ತಯಾರಿಸುವ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ‘ದೆಹಲಿಯ ಕೆಂಪುಕೋಟೆ ಹಾಗೂ ದೇಶದ ಪ್ರಮುಖ ಸ್ಥಳಗಳಲ್ಲಿ ಹಾರಾಡುವ ಧ್ವಜವನ್ನು ಇಲ್ಲಿಂದಲೇ ತಯಾರಿಸಿ ಕಳುಹಿಸಲಾಗಿದೆ’ ಎಂದು ಸಿಬ್ಬಂದಿ ತಿಳಿಸಿದರು. ಧ್ವಜದಲ್ಲಿರುವ ಅಶೋಕ ಚಕ್ರ ಸಿದ್ಧಪಡಿಸುವ ಬಗೆ ಗಮನಿಸಿ ತಾವು ಸಹ ಅಶೋಕ ಚಕ್ರ ಸಿದ್ಧಪಡಿಸಿದರು. ನಂತರ ಧ್ವಜಕ್ಕೆ ಇಸ್ತ್ರೀ ಹಾಕಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ, ಪಾಲಿಸ್ಟರ್ ಧ್ವಜಕ್ಕೂ ಅನುಮತಿ ನೀಡಿದ್ದು ಖಾದಿ ಪ್ರಿಯರಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ರಾಹುಲ್ ಭೇಟಿ ನೀಡಿ, ಸಿಬ್ಬಂದಿ ಜೊತೆ ಕೆಲಕಾಲ ಚರ್ಚಿಸಿದರು.

ADVERTISEMENT

ಇದೇ ವೇಳೆ ಖಾದಿ ಗ್ರಾಮೋದ್ಯೋಗ ಸಂಸ್ಥೆ ಪದಾಧಿಕಾರಿಗಳು, ಧ್ವಜ ಸಂಹಿತೆ ತಿದ್ದುಪಡಿ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ರಾಹುಲ್‌ ಅವರಿಗೆ ಮನವಿ ನೀಡಿದರು. ಚರಕ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಾಂಪ್ರದಾಯಿಕವಾಗಿ ರಾಷ್ಟ್ರಧ್ವಜ ಖಾದಿಯಿಂದ ಮಾಡಲಾಗುತ್ತದೆ. ದೇಶದ ಏಕತೆಯನ್ನು ಪ್ರತಿನಿಧಿಸುವ ಖಾದಿಯಿಂದ ಮಾಡಿದ ರಾಷ್ಟ್ರಧ್ವಜದ ಪರವಾಗಿ ನಾವಿದ್ದೇವೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಮಧ್ಯಮ ಮತ್ತು ಚಿಕ್ಕ ಉದ್ಯಮಿಗಳ ಕೈಗಳಿಂದ ಉದ್ಯಮಗಳನ್ನು ಕಸಿದುಕೊಂಡು, ಮೂರು– ನಾಲ್ಕು ದೊಡ್ಡ ಉದ್ಯಮಿಗಳಿಗೆ ನೀಡು ತ್ತಿದೆ. ಕೃಷಿ ಕಾನೂನು, ನೋಟು ಅಮಾನ್ಯೀಕರಣ ನೀತಿ ಸಹ ಬಡವರ ವಿರೋಧಿಯಾಗಿದೆ. ಇವು ತಪ್ಪು ನಿರ್ಧಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.