ADVERTISEMENT

ಅಮಿತ್‌ ಶಾ ನಿರ್ದೇಶನದಂತೆ ಗೋಲಿಬಾರ್‌: ಬಿ.ಕೆ.ಹರಿಪ್ರಸಾದ್‌ ಆರೋಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 13:09 IST
Last Updated 24 ಡಿಸೆಂಬರ್ 2019, 13:09 IST
ಬಿ.ಕೆ.ಹರಿಪ್ರಸಾದ್‌
ಬಿ.ಕೆ.ಹರಿಪ್ರಸಾದ್‌   

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿರ್ದೇಶನದಂತೆ ಮಂಗಳೂರು ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಗಾಯಾಳುಗಳನ್ನು ಮಂಗಳವಾರ ಭೇಟಿಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಿತ್‌ ಶಾ ನಿರ್ದೇಶನದಂತೆ ಪೊಲೀಸರು ಅಮಾಯಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಿಜೆಪಿಯ ಕೆಲವು ಪದಾಧಿಕಾರಿಗಳು ಹಾಗೂ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಸಂಘಟನೆಯೊಂದರ ಪದಾಧಿಕಾರಿಗಳು ಈ ಘೋರ ಕೃತ್ಯದ ಹಿಂದಿದ್ದಾರೆ. ಅವರ ಕೈಗೊಂಬೆಯಾಗಿ ಪೊಲೀಸರು ಗೋಲಿಬಾರ್‌ ನಡೆಸಿದ್ದಾರೆ’ ಎಂದರು.

ಗೋಲಿಬಾರ್‌ ಒಂದು ಕರಾಳ ಘಟನೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ತಲೆತಗ್ಗಿಸುವಂತೆ ಆಗಿದೆ. ಎರಡು ದಶಕಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕೆಲವರ ಕೈಗೊಂಬೆಯಾಗಿದ್ದಾರೆ. ಖಾಕಿ ವಸ್ತ್ರ ಮತ್ತು ಅಶೋಕ ಸ್ತಂಭವಿರುವ ಟೊಪ್ಪಿ ಧರಿಸಿ ಜನರ ಕೆಲಸ ಮಾಡಬೇಕಾದ ಪೊಲೀಸರು ಖಾಕಿ ಚೆಡ್ಡಿ ಮತ್ತು ಕರಿ ಟೊಪ್ಪಿಯವರ ಆಣತಿಯಂತೆ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಡಿಸೆಂಬರ್‌ 19ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಕೆಲವರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪೊಲೀಸರು ನಿಯಮಗಳ ಪ್ರಕಾರ ಕ್ರಮ ಜರುಗಿಸಿಲ್ಲ. ಪ್ರತಿಭಟನಾಕಾರರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಗುಂಡು ಹಾರಿಸುವ ಮೊದಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿ ನಿಯಂತ್ರಿಸುವುದು ಅತ್ಯಂತ ಕಷ್ಟ ಎನಿಸುವ ವಾತಾವರಣದಲ್ಲಿ ಮೊಣಕಾಲಿಗಿಂತ ಕೆಳಗೆ ಗುಂಡಿಕ್ಕಬೇಕು ಎಂಬ ಮಾರ್ಗಸೂಚಿಯನ್ನೂ ಪಾಲಿಸಿಲ್ಲ ಎಂದರು.

ಕೊಲೆ ಮೊಕದ್ದಮೆಗೆ ಆಗ್ರಹ: ‘ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಅಮಾಯಕರನ್ನು ಗುಂಡಿಟ್ಟು ಕೊಂದಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಮತ್ತು ಗೋಲಿಬಾರ್‌ನ ಮುಂಚೂಣಿಯಲ್ಲಿದ್ದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು. ಈ ಎಲ್ಲ ಅಧಿಕಾರಿಗಳನ್ನೂ ತಕ್ಷಣವೇ ಅಮಾನತು ಮಾಡಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕರಣದ ಹೊಣೆ ಹೊತ್ತುಕೊಳ್ಳಬೇಕು’ ಎಂದು ಹರಿಪ್ರಸಾದ್‌ ಆಗ್ರಹಿಸಿದರು.

ಮೃತರ ಕುಟುಂಬಗಳಿಗೆ ಘೋಷಿಸಿರುವ ಪರಿಹಾರದ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಬೇಕು. ಗಾಯಾಳುಗಳಿಗೆ ತಲಾ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಪರಿಹಾರ ನೀಡಬೇಕು. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಮೂರ್ತಿಯಿಂದ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಗೋಲಿಬಾರ್‌ಗೆ ಸಂಬಂಧಿಸಿದಂತೆ ಪೊಲೀಸ್‌ ಕಮಿಷನರ್‌ ಕಟ್ಟುಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಮುಖ್ಯಮಂತ್ರಿ, ಗೃಹಸಚಿವ ಮತ್ತು ಪೊಲೀಸ್‌ ಅಧಿಕಾರಿಗಳ ಹೇಳಿಕೆಗಳು ವಿಭಿನ್ನವಾಗಿವೆ. ಘಟನೆಗೆ ಸಂಬಂಧಿಸಿದ ವಿಡಿಯೊ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರ ಅನುಕೂಲಕ್ಕೆ ತಕ್ಕಂತೆ ಎಡಿಟ್‌ ಮಾಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಜನರ ಪಾಲಿಗೆ ಕರಾಳ ಶಾಸನ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ಪದವಿ ಪ್ರಮಾಣಪತ್ರ ನೀಡಲು ಆಗಿಲ್ಲ. ದೇಶದ ಜನರ ಜನನ ಪ್ರಮಾಣಪತ್ರ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.