ADVERTISEMENT

ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದಾರಾ: ಸಚಿವ ಕೆ.ಎಸ್‌ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 5:51 IST
Last Updated 22 ಆಗಸ್ಟ್ 2019, 5:51 IST
   

ವಿಜಯಪುರ:ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದರಾ, ಅವರು‌ ದೇಶದ ಎಲ್ಲ ಜನರಿಗೂ ಗೊತ್ತಿಲ್ಲವೇ?

ಹೀಗೊಂದು ಪ್ರಶ್ನೆ ಮಾಡಿದ್ದುಬಿಜೆಪಿ ಸರ್ಕಾರದ ನೂತನ ಸಚಿವ ಕೆ.ಎಸ್‌. ಈಶ್ವರಪ್ಪ.ಮಂಗಳೂರು ಬಿಟ್ಟು ಬೇರೆ ಜಿಲ್ಲೆಗಳೇ ತಿಳಿಯದನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂಬ ಅವರದ್ದೇ ಪಕ್ಷದ ನಾಯಕರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನಳಿನ್ ಕುಮಾರ ಕಟೀಲ್ ನೇಮಕಗೊಂಡಿದ್ದಾರೆ. ಅವರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಅವರಿಗೆ ರಾಜ್ಯದ ಎಲ್ಲಾ ಭಾಗಗಳ ಪರಿಚಯ ಇಲ್ಲದಿದ್ದರೂ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದರಾ, ಅವರು‌ ದೇಶದ ಎಲ್ಲ ಜನರಿಗೂ ಗೊತ್ತಿಲ್ಲವೇ?’ ಎಂದೂ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಅವರ ಮಾತನ್ನು ಕೇಳಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವ ಅವಶ್ಯಕತೆ ನಮಗಿಲ್ಲ. ಅವರು ನಮ್ಮ ಪಕ್ಷದಲ್ಲೇ ಇದ್ದುಕೊಂಡು ಈ ರೀತಿಯ ಹೇಳಿಕೆ ಕೊಡಬಾರದು. ಈ ಹಿಂದೆ ಹಲವು ಬಾರಿ ತಿಳಿವಳಿಕೆ ಹೇಳಿದ್ದೇನೆ. ಆದರೂ ಕೇಳುತ್ತಿಲ್ಲ. ದೇವರು ಆದಷ್ಟು ಬೇಗ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದರು.

ADVERTISEMENT

ಜಾರಕಿಹೊಳಿ ಕುಟುಂಬ ಸರ್ಕಾರ ಬೀಳಿಸಲ್ಲ

ಜಾರಕಿಹೊಳಿ ಕುಟುಂಬ ಸರ್ಕಾರವನ್ನು ಬೀಳಿಸಲ್ಲ. ಜಾರಕಿಹೊಳಿ ಅವರೇ ತಮಗೆ ಶೀಘ್ರ ಸಚಿವ ಸ್ಥಾನ ಸಿಗುತ್ತದೆ. ತಾವುಯಾರೂ ಸರ್ಕಾರಕ್ಕೆ ಧಕ್ಕೆ ತರುವುದಿಲ್ಲ ಎಂದು ಹೇಳಿದ್ದಾರೆ. ಉಮೇಶ ಕತ್ತಿ ಸೇರಿದಂತೆ ಯಾರೂ ಸರ್ಕಾರ ಉರುಳಿಸಲು ಯತ್ನ ನಡೆಸಿಲ್ಲ. ನಮ‌್ಮ ಸರ್ಕಾರ ಪೂರ್ಣ ಅವಧಿ ಪೂರೈಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಭಾಪತಿ ಕೆ.ಆರ್.ರಮೇಶಕುಮಾರ್ ಅವರು ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸಿದ್ದಾರೆ.ಅತೃಪ್ತರನ್ನು ಅನರ್ಹಗೊಳಿಸಿರುವುದು ತಪ್ಪು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಭೀಕರ ಪ್ರವಾಹ

ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಹಿಂದೆಂದೂ ಇಂತಹ ಪ್ರವಾಹವನ್ನು ಕಂಡಿಲ್ಲ. ರಾಜ್ಯದ ಜನರು ತಮ್ಮ ಅಣ್ಣ -ತಮ್ಮ, ಅಕ್ಕ-ತಂಗಿಯರಿಗೆ ತೊಂದರೆಯಾಗಿದೆ ಎನ್ನುವಂತೆ ಸಹಾಯಕ್ಕೆ ಧಾವಿಸಿದ್ದಾರೆ. ಪ್ರತಿ ಸಂತ್ರಸ್ತರ ಕುಟುಂಬಕ್ಕೆ ₹10 ಸಾವಿರ ಪರಿಹಾರ ತಲುಪಿದೆ ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಎಲ್ಲ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಾತ್ಕಾಲಿಕ ಪರಿಹಾರದ ಜತೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಸಚಿವರ ಓಡಾಟದಿಂದ ಸಂತ್ರಸ್ತರಲ್ಲಿ ಧೈರ್ಯ ಬಂದಿದೆ. ಎಲ್ಲ ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ಮೂಲಕ ₹1 ಕೋಟಿ ಬಿಡುಗಡೆ ಮಾಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.