ADVERTISEMENT

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ 501, ಬಿಜೆಪಿ 433, ಜೆಡಿಎಸ್ 45 ಸ್ಥಾನ

ಜೆಡಿಎಸ್‌ ಹಿಂದಿಕ್ಕಿದ ಪಕ್ಷೇತರರು l ಖಾತೆ ತೆರೆದ ಆಮ್‌ ಆದ್ಮಿ ಪಕ್ಷ

ವೈ.ಗ.ಜಗದೀಶ್‌
Published 31 ಡಿಸೆಂಬರ್ 2021, 6:17 IST
Last Updated 31 ಡಿಸೆಂಬರ್ 2021, 6:17 IST
ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರುಪ್ರಜಾವಾಣಿ ಚಿತ್ರ/ಮಹಾಂತೇಶ ಹೊಗರಿ
ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರುಪ್ರಜಾವಾಣಿ ಚಿತ್ರ/ಮಹಾಂತೇಶ ಹೊಗರಿ   

‘ಕಮಲ’ದ ಭದ್ರನೆಲೆ ಎಂದು ಬಿಜೆಪಿಯವರೇ ಭಾವಿಸುವ ನಗರ ಪ್ರದೇಶಗಳಲ್ಲಿ ರಾಜ್ಯದ ಆಡಳಿತಾರೂಢ ಪಕ್ಷ ತುಸು ಹಿನ್ನಡೆ ಅನುಭವಿಸಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್‌ ಅಲ್ಪ ಮುನ್ನಡೆ ಸಾಧಿಸಿದೆ. ಕೆಲವು ಕಡೆಗಳಲ್ಲಿ ಜೆಡಿಎಸ್‌ ಸಾಧನೆ ತೋರಿದ್ದರೂಒಟ್ಟಾರೆ ಫಲಿತಾಂಶ ದಳಪತಿಗಳ ಮಹತ್ವಾಕಾಂಕ್ಷೆಯನ್ನು ಕುಗ್ಗಿಸಿದೆ.

ವಿಧಾನಸಭೆಯ ಎರಡು ಉಪಚುನಾವಣೆ, ವಿಧಾನಪರಿಷತ್ತಿನ 25 ಕ್ಷೇತ್ರಗಳ ಚುನಾವಣೆ ಬಳಿಕ ಇದೇ 27ರಂದು ನಡೆದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಗುರುವಾರ (ಡಿ.30) ಪ್ರಕಟವಾಗಿದ್ದು, ಅದರ ಒಟ್ಟಾರೆ ನೋಟವಿದು. ಈ ಬಾರಿಯ ವಿಶೇಷವೆಂದರೆ ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಒಂದು ಸ್ಥಾನದಲ್ಲಿ ಗೆದ್ದಿದ್ದು, ಕರ್ನಾಟಕದಲ್ಲಿ ಖಾತೆ ತೆರೆದಿದೆ.

ಬಸವರಾಜ ಬೊಮ್ಮಾಯಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಡೆದ ಮೂರನೇ ಚುನಾವಣೆಯಲ್ಲೂ ಬಿಜೆಪಿಗೆ ನಿರೀಕ್ಷಿತ ಗೆಲುವು ದಕ್ಕಿಲ್ಲ. ವಿಧಾನಸಭೆಯ ಐದು ವರ್ಷದ ಅವಧಿಯೊಳಗೆ ನಡೆಯುವ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷವೇ ಹೆಚ್ಚಿನ ಸ್ಥಾನ ಗೆದ್ದುಕೊಳ್ಳುವುದು ಪರಿಪಾಟ. ಕೆಲವೊಮ್ಮೆ ಇದಕ್ಕೆ ತದ್ವಿರುದ್ಧವಾದ ಫಲಿತಾಂಶಗಳು ಬಂದಿದ್ದುಂಟು.ಹಾಗಂತ ನಗರ ಪ್ರದೇಶಗಳಲ್ಲಿ ಬಿಜೆಪಿ ತೀರಾ ಕುಸಿದುಬಿದ್ದಿದೆ ಎಂದೂ ಹೇಳಲಿಕ್ಕಾಗದು. ಏಕೆಂದರೆ, ಐದು ನಗರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಶಕ್ತಿ ಪಡೆದಿದೆ. ಎರಡರಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ.

ADVERTISEMENT

ಒಟ್ಟಾರೆ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಒಳಹೊರಗನ್ನು ಅವಲೋಕಿಸಿದರೆ ಬಿಜೆಪಿ ಪ್ರಬಲವಾಗಿದ್ದ ಕಡೆಗಳಲ್ಲಿ, ಸಚಿವರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲಧಾರಿಗಳು ಎಡವಿದ್ದಾರೆ. ಅಲ್ಲೆಲ್ಲ ಕಾಂಗ್ರೆಸ್‌ ಅಥವಾ ಪಕ್ಷೇತರರೇ ಮೇಲುಗೈ ಸಾಧಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಮೂರು ಚುನಾವಣೆ ಗಳನ್ನು ದೃಷ್ಟಾಂತದಲ್ಲಿಟ್ಟು ಒಟ್ಟಂದದಲ್ಲಿ ನೋಡಿದರೆ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯ ಪರ್ವ ಶುರುವಾದ ಲಕ್ಷಣಗಳು ಗೋಚರಿಸುತ್ತವೆ. ಹಾಗಂದ ಮಾತ್ರಕ್ಕೆ, ಬೊಮ್ಮಾಯಿ ನೇತೃತ್ವದಅಲ್ಪಕಾಲದ ಆಡಳಿತದ ವೈಖರಿಯನ್ನು ಒರೆಗಚ್ಚಿ ಮತದಾರರು ನೀಡಿದ ಜನಾದೇಶ ಎಂದೂ ಈ ಫಲಿತಾಂಶವನ್ನು ಪರಿಭಾವಿಸಲಾಗದು. ಬಿಜೆಪಿಗಿಂತ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು ಮೇಲ್ನೋಟಕ್ಕೆ ತೋರಿದರೂ ಆ ಪಕ್ಷದ ನಾಯಕರು ಎದೆಯುಬ್ಬಿಸಿ ಬೀಗುವ ತೀರ್ಪನ್ನು ಜನ ನೀಡಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಚೇತೋಹಾರಿ ವಾತಾವರಣ ತೆರೆದು ಕೊಳ್ಳುತ್ತಿರುವುದರ ಸೂಚನೆಗಳು ಕಾಣಸಿಗುತ್ತವೆ.

ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಂಕಾಪುರ ಪುರಸಭೆಯ 23 ವಾರ್ಡ್‌ಗಳ ಪೈಕಿ 14ರಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ 7ರಲ್ಲಿ ಬಿಜೆಪಿ, 2 ರಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಆದರೆ, ಈ ಹಿಂದೆಯೂ ಇಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ವಿಧಾನಮಂಡಲದ ಅಧಿವೇಶನದ ಗಡಿಬಿಡಿಯಲ್ಲಿ ಮುಳುಗಿದ್ದ ಬೊಮ್ಮಾಯಿ, ಈ ಚುನಾವಣೆಯ ಬಗ್ಗೆ ಗಮನಹರಿಸಿದೇ ಇರುವುದು ಇಲ್ಲಿನ ಅಪಯಶಸ್ಸಿಗೆ ಕಾರಣವಿದ್ದೀತು. ನೆಹರೂ ಓಲೇಕಾರ ಪ್ರತಿನಿಧಿಸುವ ಹಾವೇರಿ ಕ್ಷೇತ್ರದ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಗಣನೀಯ ಸಾಧನೆ ಮಾಡಿದೆ. ಸಚಿವ ಸಿ.ಸಿ. ಪಾಟೀಲ ಪ್ರತಿನಿಧಿಸುವ ಗದಗ ಜಿಲ್ಲೆಯ ಗದಗ–ಬೆಟಗೇರಿ ಪುರಸಭೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ಬೆಳಗಾವಿಯಲ್ಲಿ ಇಬ್ಬರು ಬಿಜೆಪಿ ಸಂಸದರು, ಇಬ್ಬರು ಸಚಿವರೂ ಸೇರಿದಂತೆ 14 (ಓರ್ವ ಮೇಲ್ಮನೆ ಸದಸ್ಯ) ಶಾಸಕರು, ರಾಜ್ಯಸಭಾ ಸದಸ್ಯರೂ ಇದ್ದರೂ ಬಿಜೆಪಿ ಮಹತ್ವದ ಸಾಧನೆ ಮಾಡಿಲ್ಲ. ಈ ಜಿಲ್ಲೆ ವ್ಯಾಪ್ತಿಯ 5 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಶಕ್ತಿ ಪಡೆದಿದ್ದರೆ, ಕಾಂಗ್ರೆಸ್ 3, ಪಕ್ಷೇತರರು 8 ಕಡೆಗಳಲ್ಲಿ ಬಹುಮತ ಪಡೆದಿದ್ದಾರೆ. ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ, ಮೇಲ್ಮನೆ ಸದಸ್ಯ ಲಕ್ಷ್ಮಣ ಸವದಿ ಪ್ರಾತಿನಿಧ್ಯ ಇರುವ ಅಥಣಿ ಪುರಸಭೆಯ 27 ವಾರ್ಡ್‌ಗಳಲ್ಲಿ 15ರಲ್ಲಿ ಗೆದ್ದಿರುವ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಬಿಜೆಪಿ 9 ಸ್ಥಾನ ಮಾತ್ರ ಪಡೆದಿದೆ. 3 ಪಕ್ಷೇತರರ ಪಾಲಾಗಿದೆ.

ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣ ಪಂಚಾಯಿತಿಯಲ್ಲಿ 17ಕ್ಕೆ 17 ವಾರ್ಡ್‌ಗಳನ್ನೂ ಪಕ್ಷೇತರರೇ ಗೆದ್ದಿದ್ದರೆ, ಜೊಲ್ಲೆಯವರ ಸ್ವಂತ ಊರು ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿಯಲ್ಲಿ 17 ವಾರ್ಡ್‌ಗಳಲ್ಲಿ 16 ರಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. 1ರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಲ್ಲಿ ಬಿಜೆಪಿ 6ಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ‍ಪಕ್ಷೇತರರು 10ರಲ್ಲಿ ವಿಜಯ ಸಾಧಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಪ್ರಯಾಸ ಪಟ್ಟು ಸರಳ ಬಹುಮತ ಪಡೆದಿದೆ. ನೂತನ ಜಿಲ್ಲೆ ವಿಜಯನಗರ ವ್ಯಾಪ್ತಿಯ ಹೊಸಪೇಟೆ ನಗರಸಭೆಯಲ್ಲಿ ‘ಗದ್ದುಗೆ ಹಿಡಿದೇ ತೀರುತ್ತೇವೆ’ ಎಂದು ಹೇಳಿದ್ದ ಸಚಿವ ಆನಂದ್‌ಸಿಂಗ್ ಅದರಲ್ಲಿ ಯಶಸ್ವಿಯಾಗಿಲ್ಲ. 35 ವಾರ್ಡ್‌ಗಳ ಪೈಕಿ 12ರಲ್ಲಿ ಕಾಂಗ್ರೆಸ್, 10ರಲ್ಲಿ ಬಿಜೆಪಿ ಗೆದ್ದಿದೆ. 12 ಮಂದಿ ಪಕ್ಷೇತರರು, 1ರಲ್ಲಿ ಎಎಪಿ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಸಚಿವ ಗೋವಿಂದ ಕಾರಜೋಳ ಪ್ರತಿನಿಧಿಸುವ ಮುಧೋಳ ಕ್ಷೇತ್ರದ ಬೆಳಗಲಿ ಪಟ್ಟಣ ಪಂಚಾಯಿತಿಯ 18 ವಾರ್ಡ್‌ಗಳಲ್ಲಿ 8 ರಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ತಲಾ ಐದು ವಾರ್ಡ್‌ಗಳನ್ನು ಬಿಜೆಪಿ, ಪಕ್ಷೇತರರು ತಮ್ಮದಾಗಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ನಗರಸಭೆಯ 30 ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ 11ರಲ್ಲಿ ಕಾಂಗ್ರೆಸ್‌,7ರಲ್ಲಿ ಜೆಡಿಎಸ್‌ ಗೆದ್ದಿದ್ದರೆ, ಬಿಜೆಪಿ 4ಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಪಕ್ಷೇತರರು 8 ಕಡೆ ವಿಜಯ ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ ಪಕ್ಷೇತರರನ್ನು ವಿಶ್ವಾಸಕ್ಕೆ ಪಡೆಯಬೇಕು. ಪಕ್ಷೇತರರು ನೆರವಿಗೆ ಬಾರದಿದ್ದರೆ ಯಾರೂ ಅಧಿಕಾರ ಹಿಡಿಯುವ ಪರಿಸ್ಥಿತಿ ಇಲ್ಲ.

***

ಈ ಹಿಂದೆ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಯಶಸ್ಸು ಸಿಗುತ್ತಿರಲಿಲ್ಲ. ಈ ಬಾರಿ ಗದಗ ಬೆಟಗೇರಿ ಸೇರಿ ಹಲವು ಕಡೆ ನಾವು ದೊಡ್ಡ ಯಶಸ್ಸು ಕಂಡಿದ್ದೇವೆ
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

***

ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತದೆ
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

***

ವಿಜಯಪುರ, ರಾಯಚೂರು, ಶಿರಾ, ಚಿಕ್ಕಮಗಳೂರು ಮತ್ತಿತರೆ ಕಡೆ ನಮ್ಮವರು ಗೆದ್ದಿದ್ದಾರೆ. ಶಿರಾದಲ್ಲಿ ಜೆಡಿಎಸ್ ಮುಳುಗಿತು ಎಂದವರಿಗೆ ಅಲ್ಲಿಯ ಜನ ಉತ್ತರ ನೀಡಿದ್ದಾರೆ.
- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.