ADVERTISEMENT

‘ಆನಂದ’ ಇಲ್ಲದೇ ಸಿಂಗ್ ಅಧಿಕಾರ ಸ್ವೀಕಾರ!

‘ಕುರ್ಚಿಯಲ್ಲಿ ಕೂರಿಸಿದ’ ಅಶೋಕ ಮತ್ತು ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 22:15 IST
Last Updated 24 ಆಗಸ್ಟ್ 2021, 22:15 IST
ಆನಂದ ಸಿಂಗ್
ಆನಂದ ಸಿಂಗ್   

ಬೆಂಗಳೂರು: ಪ್ರಬಲ ಖಾತೆಗಾಗಿ ಮುನಿಸಿಕೊಂಡು ಬೆಂಗಳೂರಿನತ್ತ ತಲೆ ಹಾಕದೇ ಹೊಸಪೇಟೆಯಲ್ಲೇ ಬೀಡು ಬಿಟ್ಟಿದ್ದ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರು ಮಂಗಳವಾರ ಮಧ್ಯಾಹ್ನ ‘ದಿಢೀರ್‌’ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕಾರ ಕ್ರಿಯೆಯೇ ಒಂದು ರೀತಿಯಲ್ಲಿ ಪ್ರಹಸನದಂತೆ ನಡೆಯಿತು. ಬಾಯಿ ಮಾತಿನಲ್ಲಿ ತಮಗೆ ಅಸಮಾಧಾನ ಇಲ್ಲ ಎಂದು ಹೇಳುತ್ತಲೇ ಒಲ್ಲದ ಮನಸ್ಸಿನಿಂದಲೇ ಆನಂದ್‌ಸಿಂಗ್‌ ಅಧಿಕಾರ ಸ್ವೀಕರಿಸಿದರು. ಪೂರ್ವ ನಿಗದಿಯಾದ ಯಾವುದೇ ‘ಕಾರ್ಯಕ್ರಮ’ಗಳಲ್ಲಿದೇ ಏಕಾಏಕಿ ಸಚಿವಗಿರಿ ಸ್ವೀಕರಿಸಿದರು.

ತಮ್ಮನ್ನು ಭೇಟಿ ಮಾಡಲು ಬಂದಿದ್ದ ಆನಂದ್‌ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಯವಾಗಿಯೇ ತರಾಟೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.

ADVERTISEMENT

‘ನೀವು ಹಿರಿಯರು. ಕೊಟ್ಟಿರುವ ಖಾತೆಯನ್ನು ಚೆನ್ನಾಗಿ ನಿಭಾಯಿಸುವುದನ್ನು ಮೊದಲಿಗೆ ಕಲಿಯಬೇಕು. ಚೆನ್ನಾಗಿ ಕೆಲಸ ಮಾಡಿದ ಮೇಲೆ ಬೇರೆ ಖಾತೆಗಳನ್ನು ನಿಭಾಯಿಸಲು ಸಾಧ್ಯ. ಖಾತೆ ಹಂಚಿಕೆ ಆದ ಮೇಲೆ ಅಧಿಕಾರ ಸ್ವೀಕಾರ ಮಾಡದೇ ನಿಮ್ಮ ಊರಿನಲ್ಲಿ ಉಳಿದುಕೊಂಡಿರುವುದು ಸರಿಯೇ. ಮೊದಲಿಗೆ ಹೋಗಿ ಅಧಿಕಾರ ಸ್ವೀಕರಿಸಿ, ಕೆಲಸ ಆರಂಭಿಸಿ’ ಎಂದು ಬೊಮ್ಮಾಯಿ ಸೂಚಿಸಿದರು.

‘ಖಾತೆ ಹಂಚಿಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ. ವರಿಷ್ಠರ ತೀರ್ಮಾನದ ಪ್ರಕಾರ ಖಾತೆ ಹಂಚಿಕೆ ಆಗಿದೆ. ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ನಿಮ್ಮ ಭಾವನೆಯನ್ನು ಹೇಳುತ್ತೇನೆ. ಮುಂದೇನಾಗುತ್ತದೆಯೋ ನೋಡೊಣ’ ಎಂದು ಹೇಳಿದರು ಎಂದು ಮೂಲಗಳು ವಿವರಿಸಿವೆ.

ಇದರಿಂದ ಆನಂದ್‌ಸಿಂಗ್ ಸಮಾಧಾನಗೊಳ್ಳಲಿಲ್ಲ. ಆಗ ಕಂದಾಯ ಸಚಿವ ಆರ್‌.ಅಶೋಕ ಮತ್ತು ಶಾಸಕ ರಾಜೂಗೌಡ ಅವರು ಸಿಂಗ್‌ ಅವರನ್ನು ಕರೆದುಕೊಂಡು ವಿಕಾಸಸೌಧಕ್ಕೆ ಬಂದರು. ಅಧಿಕಾರ ಸ್ವೀಕಾರ ಮಾಡುವವರೆಗೂ ಜತೆಗೆ ಇದ್ದರು. ಬೇಸರದಲ್ಲಿರುವ ಸಿಂಗ್‌ ರಾಜೀನಾಮೆ ನೀಡಿ ಮುಜುಗರ ಉಂಟು ಮಾಡಬಹುದು ಎಂಬ ಕಾರಣಕ್ಕೇ ಇವರಿಬ್ಬರೂ ಸಿಂಗ್‌ ಜತೆಗೆ ಬಂದಿದ್ದರು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಭೇಟಿಯ ಬಳಿಕ ಆನಂದ್‌ಸಿಂಗ್ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರನ್ನು ಭೇಟಿ ಮಾಡಿದರು. ಕಟೀಲ್‌ ಕೂಡಾ ಸಚಿವರಾಗಿ ಅಧಿಕಾರ ಸ್ವೀಕರಿಸುವಂತೆ ಸಲಹೆ ನೀಡಿದರು.

ನಾಟಕ ಆಡ್ತಾ ಇಲ್ಲ: ಸಿಂಗ್‌

‘ನನ್ನ ನಿಲುವನ್ನು ಮುಖ್ಯಮಂತ್ರಿಯವರಿಗೆ ತಿಳಿಸಲೆಂದು ಭೇಟಿ ಮಾಡಿದೆ. ನನ್ನ ಖಚಿತ ಅಭಿಪ್ರಾಯವನ್ನು ಅವರಿಗೆ ಹೇಳಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಾಧ್ಯಕ್ಷರನ್ನೂ ಭೇಟಿ ಮಾಡಿ ನನ್ನ ಬೇಡಿಕೆಯನ್ನು ಅವರ ಗಮನಕ್ಕೆ ತಂದಿದ್ದೇನೆ. ಇಬ್ಬರೂ ನನ್ನ ಬೇಡಿಕೆ ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ. ನಾನು ಯಾವುದೇ ನಾಟಕ ಆಡುತ್ತಿಲ್ಲ’ ಎಂದು ಆನಂದ್‌ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ‘ಆನಂದ್‌ ಸಿಂಗ್ ಅವರು ಒಳ್ಳೆಯ ಮುಹೂರ್ತಕ್ಕೆ ಕಾಯುತ್ತಿದ್ದರು. ಈ ಹಿಂದೆ ಅವರನ್ನು ಭೇಟಿ ಮಾಡಿದಾಗ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಅದನ್ನು ಮುಖ್ಯಮಂತ್ರಿಯವರ ಜತೆಗೂ ಚರ್ಚಿಸಿದ್ದೇವೆ. ಮುಖ್ಯಮಂತ್ರಿಯವರು ದೆಹಲಿ ಭೇಟಿಯ ಸಂದರ್ಭದಲ್ಲಿ ವರಿಷ್ಠರ ಗಮನಕ್ಕೆ ತರುತ್ತಾರೆ. ಪಕ್ಷದಲ್ಲಿ ಯಾರಿಗೂ ಅಸಮಾಧಾನವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.