
ಕರ್ನಾಟಕ ಕಂಡ ಅಪರೂಪದ ಕಮ್ಯುನಿಸ್ಟ್ ಸಂಗಾತಿ, ದುಡಿಯುವ ಜನರ ಮೆಚ್ಚಿನ ಕಾರ್ಮಿಕ ನಾಯಕ, ಕಾಮ್ರೆಡ್ ಎಚ್.ವಿ. ಅನಂತ ಸುಬ್ಬರಾವ್ ನಿರ್ಗಮನ ಅಕ್ಷರಶಃ ಸಾರ್ವಜನಿಕ ಜೀವನಕ್ಕೆ ತುಂಬಲಾಗದ ನಷ್ಟ. ಅವರನ್ನು ತುಂಬಾ ಹತ್ತಿರದಿಂದ ನೋಡಿದ ನನ್ನಂಥವರಿಗೆ ಈ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಅಚ್ಚುಮೆಚ್ಚಿನ ನಾಯಕರಾಗಿದ್ದ ಅನಂತ ಸುಬ್ಬರಾವ್ ಅವರಂಥವರು ನಮ್ಮ ಸಾರ್ವಜನಿಕ ಜೀವನಕ್ಕೆ ಒಂದು ಘನತೆಯನ್ನು ತಂದು ಕೊಟ್ಟವರು. ಅವರದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರ ಬದುಕು ಪಾರದರ್ಶಕವಾಗಿತ್ತು. ನಂಬಿದ ಸಿದ್ಧಾಂತ ಮತ್ತು ಶ್ರಮಜೀವಿಗಳ ಹೋರಾಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅನಂತ ಸುಬ್ಬರಾವ್ ತಮ್ಮನ್ನು ತಾವು ಮೇಣದ ಬತ್ತಿಯಂತೆ ಸುಟ್ಟುಕೊಂಡು ಚಳವಳಿ ಕಟ್ಟಿದವರು. ಅವರ ಮಾತು ಮತ್ತು ಕೃತಿಯಲ್ಲಿ ಒಂದಿಂಚು ವ್ಯತ್ಯಾಸವೂ ಇರಲಿಲ್ಲ.
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದ ಅನಂತ ಸುಬ್ಬರಾವ್ ಒಂದೊಂದು ಹೆಜ್ಜೆ ಇಡುತ್ತ ಬಹು ಎತ್ತರಕ್ಕೆ ಬೆಳೆದು ನಿಂತವರು. ಜೀವ ವಿಮಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಅವರು ವಿಮಾ ನೌಕರರ ಸಂಘಟನೆಯಲ್ಲಿ ಮಾರ್ಕ್ಸ್‌ವಾದದ ಸೈದ್ಧಾಂತಿಕ ದೀಕ್ಷೆಯನ್ನು ಪಡೆದವರು. ಬರೀ ಸಿದ್ಧಾಂತವನ್ನು ಅರಿತುಕೊಂಡು ಅವರು ಸುಮ್ಮನಿರಲಿಲ್ಲ. ಸುಲಿಗೆ, ಶೋಷಣೆಯಿಲ್ಲದ ಹೊಸ ಸಮಾಜವನ್ನು ನಿರ್ಮಿಸುವ ಕನಸನ್ನು ನನಸಾಗಿಸಲು ತನ್ನ ಇಡೀ ಬದುಕನ್ನೇ ಸಮರ್ಪಿಸಿಕೊಂಡರು. ಸಾರಿಗೆ ಸಂಸ್ಥೆಯ ಕಾರ್ಮಿಕರನ್ನು ಸಂಘಟಿಸುವುದು ಸುಲಭದ ಸಂಗತಿಯಲ್ಲ.ಅದಕ್ಕಾಗಿ ಇಡೀ ಕರ್ನಾಟಕವನ್ನು ನೂರಾರು ಸಲ ಸುತ್ತಿದರು.ಪ್ರತಿ ಜಿಲ್ಲೆ–ತಾಲ್ಲೂಕು–ಡಿಪೊಗೆ ಹೋಗಿ ಕಾರ್ಮಿಕರ ಕಷ್ಟಗಳನ್ನು ಆಲಿಸಿದರು. ಸಮಸ್ಯೆ ಅರಿತುಕೊಂಡು ಸರ್ಕಾರಕ್ಕೆ ಮನದಟ್ಟು ಮಾಡುವ ಚಾಕಚಕ್ಯತೆ ಅವರಿಗಿತ್ತು. ಅವರ ಮತ್ತು ನನ್ನ ಐದು ದಶಕಗಳ ಪರಿಚಯ ಮತ್ತು ಒಡನಾಟದಲ್ಲಿ ನಾನು ಕಂಡಂತೆ ಅವರಿಗೆ ಸ್ವಂತದ ಬದುಕಿಗಿಂತ ಲಕ್ಷಾಂತರ ಸಾರಿಗೆ ನೌಕರರ, ಕಾರ್ಮಿಕರ ಬದುಕು ಮುಖ್ಯವಾಗಿತ್ತು. ಮಧುಮೇಹ, ನೂರೆಂಟು ಆರೋಗ್ಯದ ಸಮಸ್ಯೆಗಳಿದ್ದರೂ ಅನಂತ ಸುಬ್ಬರಾಯರ ಹೋರಾಟ, ಚಳವಳಿಗಳೆದುರು ಅವೆಲ್ಲವೂ ನಗಣ್ಯವಾಗಿದ್ದವು.
ಅವರು ಕೇವಲ ವೇದಿಕೆಯ ಮೇಲೆ ನಿಂತು ಭಾಷಣ ಮಾಡಿ ಹೋಗುವ ನಾಯಕರಾಗಿರಲಿಲ್ಲ. ಪ್ರತಿಯೊಬ್ಬ ಕಾರ್ಮಿಕನ ಮನೆಗೆ ಹೋಗಿ ಕಷ್ಟ ಸುಖ ಕೇಳುತ್ತಿದ್ದರು. ಆರೋಗ್ಯ ಸಮಸ್ಯೆ ಇದ್ದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸಕಲ ನೆರವನ್ನೂ ನೀಡುತ್ತಿದ್ದರು. ಆಸ್ಪತ್ರೆಗೆ ಸೇರಿದ್ದರೆ ಅಲ್ಲಿ ಹೋಗಿ ವಿಚಾರಿಸುತ್ತಿದ್ದರು. ಅಂತಲೇ ಕಾರ್ಮಿಕರ ಪಾಲಿಗೆ ಅವರು ಕೇವಲ ನೇತಾರರಾಗಿರಲ್ಲಿ ಹಿರಿಯಣ್ಣನಂತೆ ಇದ್ದರು. ಅನಂತ ಸುಬ್ಬರಾಯರು ಬೆಂಗಳೂರಿನಿಂದ ಒಂದು ಕರೆ ಕೊಟ್ಟರೆ ಸಾಕು ಇಡೀ ರಾಜ್ಯದ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ವೈದ್ಯರು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಇಡೀ ನಾಡನ್ನು ಸುತ್ತುವ ಇನ್ನೊಬ್ಬ ನಾಯಕನನ್ನು ನಾನು ನೋಡಿಲ್ಲ.
ಸಾರ್ವಜನಿಕ ಒಡೆತನದ ರಾಜ್ಯ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಮಸಲತ್ತು ನಡೆದಾಗಲೆಲ್ಲ ಅದನ್ನು ತಡೆಯಲು ಅವಿಶ್ರಾಂತ ಹೋರಾಟ ಮಾಡಿದವರು ಅವರು. ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಅಂಕಿ ಸಂಖ್ಯೆಗಳು ಸದಾ ಅವರ ನಾಲಿಗೆ ಮೇಲೆ ಇರುತ್ತಿದ್ದವು.
ತಿಂಗಳು, ಎರಡು ತಿಂಗಳಿಗೊಮ್ಮೆ ಕರ್ನಾಟಕ ಸುತ್ತಿ ಶ್ರಮಿಕರ ಕಷ್ಟ–ಸುಖಗಳನ್ನು ಆಲಿಸದಿದ್ದರೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ಅವರು ಇಡೀ ದಿನ ಎಐಟಿಯುಸಿ ಕಚೇರಿಯಲ್ಲೇ ಇರುತ್ತಿದ್ದರು. ಇಷ್ಟು ಮಾತ್ರವಲ್ಲ ರಾತ್ರಿ ಕಚೇರಿಯಲ್ಲೇ ಉಳಿಯುತ್ತಿದ್ದರು. ಚಾಪೆ, ಪೇಪರ್‌ಗಳನ್ನು ಹಾಸಿಕೊಂಡು ಮಲಗುತ್ತಿದ್ದರು.
ಅನಂತ ಸುಬ್ಬರಾವ್ ಅವರ ಮನೆಯಲ್ಲಿ ಜಾತಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರೇ ಬರಲಿ ಅವರ ಜೊತೆಗೆ ಕುಳಿತು ಊಟ ಮಾಡಬೇಕೆಂದು ಅವರು ಬಯಸುತ್ತಿದ್ದರು. ತಮ್ಮ ತಟ್ಟೆಯನ್ನು ತಾವೇ ತೊಳೆಯುತ್ತಿದ್ದ ಅವರು, ಬಹುತೇಕ ಸಲ ಮನೆಯಲ್ಲಿ ಊಟ ಮಾಡಿದ ಎಲ್ಲರ ಪಾತ್ರೆಗಳನ್ನು ತೊಳೆಯುವುದಕ್ಕೆ ಹಿಂಜರಿಯುತ್ತಿರಲಿಲ್ಲ. ಮಗಳು ಜಾತಿರಹಿತ ಮದುವೆಗೆ ಮುಂದಾದಾಗ ಅನಂತ ಸುಬ್ಬರಾಯರು ತಾವೇ ಮುಂದೆ ನಿಂತು ಮದುವೆ ಮಾಡಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಒಡನಾಟವನ್ನೂ ಹೊಂದಿದ್ದ ಅನಂತ ಸುಬ್ಬರಾಯರಂಥ ಅಪರೂಪದ ನಾಯಕನನ್ನು ಕಳೆದುಕೊಂಡು ರಾಜ್ಯದ ಕಾರ್ಮಿಕ ಚಳವಳಿ, ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಬಹುದೊಡ್ಡ ಶೂನ್ಯ ಆವರಿಸಿದೆ. ಚಳವಳಿಗಳು ಇರುವವರೆಗೆ ಅನಂತಸುಬ್ಬರಾವ್ ಇದ್ದೇ ಇರುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.