ಅಂಗನವಾಡಿ ಕೇಂದ್ರ
ಬೆಂಗಳೂರು: ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇಲಾಖೆ ಎತ್ತಂಗಡಿ ಮಾಡಿದೆ.
ಹಾಸನದಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಿದ್ದ ಆಹಾರ ಕಳಪೆ ಗುಣಮಟ್ಟದ್ದು ಎಂದು ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ, ಯೋಜನಾಧಿಕಾರಿಗಳು ಮತ್ತು ಅಧೀಕ್ಷಕ ಮಟ್ಟದ ಅಧಿಕಾರಿಗಳು ಮೇ 27, 28ರಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು.
‘ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ದೂರುಗಳು ಬರುತ್ತಿವೆ. ಕಳಪೆ ಆಹಾರ ಪೂರೈಸಿ ಕಪ್ಪು ಪಟ್ಟಿಗೆ ಸೇರಿದ್ದ ಕಂಪನಿಯಿಂದಲೇ ಆಹಾರ ಸಾಮಗ್ರಿ ಖರೀದಿಸಿ, ಅದರಿಂದ ಸಿದ್ಧ ಆಹಾರ ತಯಾರಿಸಲಾಗುತ್ತಿದೆ. ಹೀಗಾಗಿಯೇ ಗುಣಮಟ್ಟ ಸುಧಾರಿಸಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ, ತನಿಖೆಗೆ ಆದೇಶಿಸಬೇಕು’ ಎಂದು ಅಧಿಕಾರಿಗಳು ಪತ್ರದಲ್ಲಿ ಒತ್ತಾಯಿಸಿದ್ದರು.
ಇಲಾಖೆಯ ನಿರ್ದೇಶಕರು ಜೂನ್ 2ರಂದು ವರ್ಗಾವಣೆ ಆದೇಶ ಹೊರಡಿಸಿದ್ದು, ಪತ್ರ ಬರೆದಿದ್ದವರ ಹೆಸರೂ ವರ್ಗಾವಣೆ ಪಟ್ಟಿಯಲ್ಲಿದೆ. ‘ಕೆಲ ಸಿಬ್ಬಂದಿಯನ್ನು ಅವಧಿಗೂ ಮುನ್ನವೇ ವರ್ಗಾವಣೆ ಮಾಡಿದ್ದಾರೆ. ಕೆಲವರಿಗೆ ಸ್ಥಳ ನಿಯುಕ್ತಿ ಮಾಡಿಲ್ಲ’ ಎಂದು ನಿರ್ದೇಶಕರ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಧಾರವಾಡ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕ ಹುದ್ದೆಯಲ್ಲಿದ್ದ ಸುಭಾಷ ಚಂದ್ರಗಿರಿ ಅವರು, ಕಳಪೆ ಗುಣಮಟ್ಟದ ಆಹಾರದ ಬಗ್ಗೆ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದೇ ಜೂನ್ 2ರಂದು ಅವರ ಹುದ್ದೆಗೆ ಆರ್.ಎಲ್.ಶಿರೋಳ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ.
‘ಸುಭಾಷ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಅವರನ್ನು ಧಾರವಾಡ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಿಂದ ಬಿಡುಗಡೆಯನ್ನೂ ಮಾಡಿಲ್ಲ. ಕರ್ತವ್ಯಕ್ಕೆ ಹಾಜರಾಗಿ ಎಂದು ಶಿರೋಳ ಅವರಿಗೆ ಸೂಚಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಕೊಳೆತ ಬೆಲ್ಲ ಪೂರೈಕೆ ಸಂಬಂಧ ಉನ್ನತಾಧಿಕಾರಿಗಳ ಗಮನ ಸೆಳೆದಿದ್ದ ಮೇಲ್ವಿಚಾರಕಿ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ನಿರ್ದೇಶಕರ ಕಚೇರಿಯ ಅಧಿಕಾರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.