ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸೀರೆ ಪೂರೈಕೆ ಮಾಡುವ ಗುತ್ತಿಗೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಬೇಕು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಪೂರೈಸಲು 2.79 ಲಕ್ಷ ಸೀರೆಗಳನ್ನು ಐಸಿಡಿಎಸ್ ಯೋಜನೆ ಅಡಿ ಖರೀದಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ದೇಶಿಸಿದೆ. ಇಷ್ಟು ಸೀರೆಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ಕೈಮಗ್ಗ ಅಭಿವೃದ್ಧಿ ನಿಗಮಕ್ಕೇ ನೀಡಬೇಕು ಎಂದು ಅವರು ಕೋರಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಬಟ್ಟೆ, ಸೀರೆಗಳು ಮತ್ತು ಸಮವಸ್ತ್ರವನ್ನು ಜವಳಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ ಖರೀದಿ ಮಾಡಲು ಈ ಹಿಂದೆ ಆದೇಶಿಸಲಾಗಿತ್ತು. ಅದರಂತೆ ಪೂರೈಕೆ ನಡೆಯುತ್ತಿದೆ. ಈಗಲೂ ಹಾಗೆಯೇ ಮಾಡಬೇಕು. ಇದರಿಂದ ನೇಕಾರರಿಗೆ ಉದ್ಯೋಗ ದೊರೆಯುವುದಲ್ಲದೆ, ನಷ್ಟದಲ್ಲಿರುವ ನಿಗಮದ ಪುನಶ್ಚೇತನಕ್ಕೂ ನೆರವಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
2025-26ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟು 2,79,688 ಸೀರೆಗಳನ್ನು, ಪ್ರತಿಯೊಂದಕ್ಕೆ ₹500ರಂತೆ ಖರೀದಿಸಲು ರಾಜ್ಯ ಸಚಿವ ಸಂಪುಟವು ಗುರುವಾರ ಒಪ್ಪಿಗೆ ನೀಡಿತ್ತು. ಕೇಂದ್ರ ಸರ್ಕಾರದ ಪಾಲು ₹7.91 ಕೋಟಿ ಮತ್ತು ರಾಜ್ಯ ಸರ್ಕಾರದ ಪಾಲು ₹6.07 ಕೋಟಿ ಸೇರಿ ಒಟ್ಟು ₹13.98 ಕೋಟಿ ವೆಚ್ಚದಲ್ಲಿ ಸೀರೆಗಳನ್ನು ಖರೀದಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.