
ಬೆಂಗಳೂರು: ಟೆಂಡರ್ ಕರೆಯದೆ ನಿಯಮಗಳಲ್ಲಿನ ನ್ಯೂನತೆಯನ್ನೇ ಬಳಸಿಕೊಂಡು ಕೊಟೇಶನ್ ಆಧಾರದಲ್ಲೇ ರಾಜ್ಯದ 10 ಸಾವಿರಕ್ಕೂ ಹೆಚ್ಚು ಅಂಗನ ವಾಡಿಗಳಿಗೆ ಒಂದೇ ಸಂಸ್ಥೆಯ ಮೂಲಕ ಟಿ.ವಿಗಳನ್ನು ಸರಬರಾಜು ಮಾಡಲಾಗಿದೆ.
ಯಾವುದೇ ಕಾಮಗಾರಿ ಕೈಗೊಳ್ಳಲು, ಸಾಮಗ್ರಿಗಳನ್ನು ಪೂರೈಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ಅನ್ವಯ ಟೆಂಡರ್ ಕರೆಯುವುದು ಕಡ್ಡಾಯ. ಯಾವುದೇ ಸಾಮಗ್ರಿ ಸರಬ ರಾಜು ಮಾಡಲು ಇ–ಟೆಂಡರ್‌ಗೆ ಅರ್ಜಿ ಸಲ್ಲಿಸುವ ಕಂಪನಿಗಳು ಸರ್ಕಾರ ಹಾಗೂ ಸರ್ಕಾರದ ಸಂಸ್ಥೆಗಳಿಗೆ, ನಿಗಮಗಳಿಗೆ ನಿಗದಿತ ಸಾಮಗ್ರಿಗಳನ್ನು ಪೂರೈಸಿದ ಅನುಭವ ಪ್ರಮಾಣಪತ್ರ ಹೊಂದಿರಬೇಕು. ಒಂದು ವೇಳೆ ಟೆಂಡರ್ ಮೊತ್ತ ₹10 ಕೋಟಿಗೂ ಅಧಿಕವಾಗಿದ್ದರೆ ಸಂಪುಟ ಸಭೆಯ ಅನುಮೋದನೆ ಪಡೆಯಲೇಬೇಕು. ಆರ್ಥಿಕ ಇಲಾಖೆಯಿಂದ ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ಪಡೆದರೂ ಗರಿಷ್ಠ ಮಿತಿ ₹2 ಕೋಟಿ ಇದೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಟೆಂಡರ್ ಕರೆಯದೆಯೇ ಅಂಗನವಾಡಿ ಗಳಿಗೆ ಟಿ.ವಿಗಳನ್ನು ಪೂರೈಸಲು ₹30 ಕೋಟಿ ವೆಚ್ಚ ಮಾಡಿದೆ.
ಪೂರೈಕೆಗೆ ಅಡ್ಡದಾರಿ: ಯಾವುದೇ ಇಲಾಖೆ ಅಥವಾ ಇಲಾಖೆಯ ಅಧೀನದ ಕಚೇರಿಗಳು ತಮ್ಮ ಬಳಿ ಇರುವ ಆಡಳಿತ ವೆಚ್ಚ, ಸ್ಥಳೀಯ ನಿಧಿ ಬಳಸಿಕೊಂಡು ₹5 ಲಕ್ಷದ ಒಳಗಿನ ಸಾಮಗ್ರಿಗಳನ್ನು ಖರೀದಿಸಬಹುದು. ಅದಕ್ಕಾಗಿ ಮೂರು ಕಂಪನಿಗಳಿಂದ ಕೊಟೇಶನ್ ಪಡೆಯಬೇಕು. ಯಾವ ಕಂಪನಿ ಕಡಿಮೆ ದರಕ್ಕೆ ಸಾಮಗ್ರಿಯ ದರ ನಮೂದು ಮಾಡಿರುತ್ತದೆಯೋ ಆ ಕಂಪನಿಯಿಂದ ಖರೀದಿಸಬಹುದು. ಈ ಅವಕಾಶವನ್ನು ಬಳಸಿಕೊಂಡು ಟೆಂಡರ್‌ನ ಗೊಡವೆ ಇಲ್ಲದೆ ತಾಲ್ಲೂಕು ವಾರು ಅಂಗನವಾಡಿಗಳನ್ನುಪಟ್ಟಿ ಮಾಡಿ ಸಾಮಗ್ರಿಗಳನ್ನು ಪೂರೈಸಲಾಗಿದೆ. ಪ್ರತಿ ತಾಲ್ಲೂಕಿನ ಶಿಶುಅಭಿವೃದ್ಧಿ ಯೋಜನಾ ಧಿಕಾರಿಗಳಿಗೆ (ಸಿಡಿಪಿಒ) ಬಿಲ್ ಮೊತ್ತ ಪಾವತಿಸಲು ಸೂಚಿಸಲಾಗಿದೆ.
ಇಲಾಖೆಯ ಮೇಲಧಿಕಾರಿಗಳೇ ಸಿಡಿಪಿಒ ಕಚೇರಿಗಳಿಗೆ ತಲಾ ಮೂರು ಕೊಟೇಶನ್ ತಲುಪಿಸಿದ್ದಾರೆ. ಏರ್‌ವೇವ್ ಕಂಪನಿ ಒಂದು ಯೂನಿಟ್ ಬೆಲೆಯನ್ನು ₹31,187.50 ನಿಗದಿ ಮಾಡಿದೆ. 16 ಯೂನಿಟ್‌ಗೆ ಒಂದು ಬಿಲ್ ನೀಡಲಾಗಿದೆ. ಒಂದು ಬಿಲ್‌ನ ಒಟ್ಟು ಮೊತ್ತ ₹4,99,999 ಆಗುತ್ತದೆ. ಹೀಗೆ 16 ಯೂನಿಟ್‌ಗೆಗಳಿಗೆ ಒಂದು ಬಿಲ್‌ನಂತೆ ಆಯಾ ತಾಲ್ಲೂಕಿಗೆ ಎಷ್ಟು ಯೂನಿಟ್ ಸರಬರಾಜು ಮಾಡಲಾಗಿದೆಯೋ ಅಷ್ಟು ಬಿಲ್‌ಗಳನ್ನು ಬೇರೆ ಬೇರೆ ದಿನಾಂಕ ನಮೂದಿಸಿ ನೀಡಲಾಗಿದೆ. ಟೆಂಡರ್ ಕರೆಯುವುದನ್ನು ತಪ್ಪಿಸಲು, ನಿಯಮದಂತೆಯೇ ನಡೆದುಕೊಂಡಿದ್ದೇವೆ ಎಂದು ಪ್ರತಿಪಾದಿಸಲು ಪ್ರತಿ ಬಿಲ್ ಮೊತ್ತ ₹5 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.
ಅಂಕಿ–ಅಂಶ
65,911: ಕರ್ನಾಟಕದ ಅಂಗನವಾಡಿ ಕೇಂದ್ರಗಳು
15,000: ಕೇಂದ್ರ ಪುರಸ್ಕೃತ ಯೋಜನೆ ಅಡಿ ಪೂರೈಸಲಾದ ಟಿ.ವಿಗಳು
10,000: ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಸರಬರಾಜು ಮಾಡಿದ ಟಿ.ವಿಗಳು
ಆಹಾರ ಪದಾರ್ಥ, ಟಿ.ವಿ ಸೇರಿದಂತೆ ಯಾವುದೇ ಸಾಮಗ್ರಿಗಳ ಖರೀದಿ, ಸರಬರಾಜು ವಿಕೇಂದ್ರೀಕರಣಗೊಳ್ಳಬೇಕು. ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಹೇರಬಾರದು.– ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ
ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದು, ಕೇಂದ್ರ ಪುರಸ್ಕೃತ ಯೋಜನೆಯ ಹಣವನ್ನು ಬಳಕೆ ಮಾಡಿಕೊಳ್ಳಲು ನಿಯಮದಂತೆ ಟಿ.ವಿಗಳನ್ನು ಖರೀದಿಸಲು ಸೂಚಿಸಲಾಗಿದೆ. ದುರ್ಬಳಕೆ ಆಗಿಲ್ಲ.– ಮಹೇಶ್ ಬಾಬು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.