ADVERTISEMENT

ಅನಿಲ್ ಕುಂಬ್ಳೆ ಮಗ ಮಾಯಸ್ ಅವರ ‘ಸಫಾರಿ ಸಾಗಾ’ ಕೃತಿ ಲೋಕಾರ್ಪಣೆ: ಏನು ವಿಶೇಷ?

17 ವರ್ಷದ ಮಾಯಸ್ ಕುಂಬ್ಳೆ ಛಾಯಾಗ್ರಹಣದ ಕೃತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 2:57 IST
Last Updated 9 ಮಾರ್ಚ್ 2022, 2:57 IST
ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಅವರ ಮಗ ಮಾಯಸ್ ಕುಂಬ್ಳೆ (ಎಡದಿಂದ ಮೂರನೇಯವರು) ಅವರ ‘ಸಫಾರಿ ಸಾಗಾ; ವೈಲ್ಡ್‌ ಎನ್‌ಕೌಂಟರ್ಸ್ ಆಫ್ ಎ ಯಂಗ್ ಫೋಟೊಗ್ರಾಫರ್’ ವನ್ಯಜೀವಿ ಛಾಯಾಗ್ರಹಣ ಸಂಗ್ರಹದ ಪುಸ್ತಕವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಬಿಡುಗಡೆ ಮಾಡಿದರು. ವನ್ಯಜೀವಿ ಛಾಯಾಗ್ರಾಹಕ ಮತ್ತು ಮೆಂಟರ್ ಜಯಂತ್ ಶರ್ಮಾ ಇದ್ದಾರೆ
ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಅವರ ಮಗ ಮಾಯಸ್ ಕುಂಬ್ಳೆ (ಎಡದಿಂದ ಮೂರನೇಯವರು) ಅವರ ‘ಸಫಾರಿ ಸಾಗಾ; ವೈಲ್ಡ್‌ ಎನ್‌ಕೌಂಟರ್ಸ್ ಆಫ್ ಎ ಯಂಗ್ ಫೋಟೊಗ್ರಾಫರ್’ ವನ್ಯಜೀವಿ ಛಾಯಾಗ್ರಹಣ ಸಂಗ್ರಹದ ಪುಸ್ತಕವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಬಿಡುಗಡೆ ಮಾಡಿದರು. ವನ್ಯಜೀವಿ ಛಾಯಾಗ್ರಾಹಕ ಮತ್ತು ಮೆಂಟರ್ ಜಯಂತ್ ಶರ್ಮಾ ಇದ್ದಾರೆ   

ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಮನೆಯಲ್ಲಿರುವ ಕ್ರಿಕೆಟ್ ಕಿಟ್‌ನತ್ತ ಅವರ ಮಗ ಮಾಯಸ್ ಕುಂಬ್ಳೆ ಕಣ್ಣುಹಾಯಿಸಲಿಲ್ಲ.

ಆದರೆ, ಅನಿಲ್‌ ಅವರಿಗೆ ನೆಚ್ಚಿನ ಹವ್ಯಾಸ ವನ್ಯಜೀವಿ ಛಾಯಾಗ್ರಹಣದತ್ತ ಮಾಯಸ್ ವಾಲಿದರು. ನಾಲ್ಕು ವರ್ಷಗಳ ಹಿಂದೆ ಅಪ್ಪ ಕೊಟ್ಟ ಕ್ಯಾಮೆರಾದ ಕಣ್ಣಿನಿಂದ ಅರಣ್ಯದೊಳಗಿನ ಬೆರಗಿನ ಲೋಕವನ್ನು ಸೆರೆಹಿಡಿಯಲು ಆರಂಭಿಸಿದ್ದರು. ಇದೀಗ ಆ ಚಿತ್ರಗಳ ಸಂಗ್ರಹವನ್ನು ಕೃತಿಯಾಗಿ ಹೊರತಂದಿದ್ದಾರೆ.

‘ಸಫಾರಿ ಸಾಗಾ; ವೈಲ್ಡ್‌ಎನ್‌ಕೌಂಟರ್‌ ಆಫ್‌ ಎ ಯಂಗ್ ಫೊಟೋಗ್ರಾಫರ್’ ಕಾಫಿ ಟೇಬಲ್ ಪುಸ್ತಕವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾ ಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್ ಬಿಡುಗಡೆ ಮಾಡಿದರು.

ADVERTISEMENT

ಮುಖಪುಟದಲ್ಲಿ ಹುಲಿಗಳು ನದಿಯಲ್ಲಿ ಮೈತಣಿಸಿಕೊಳ್ಳುವ ಸುಂದರ ಚಿತ್ರವಿದೆ. ಕೃತಿಯೊಳಗಡೆ ಮತ್ತಷ್ಟು ಮುದ ನೀಡುವ, ಮೈನವಿರೇಳಿಸುವ ಚಿತ್ರಗಳಿವೆ. ಕಬಿನಿ ಅರಣ್ಯಪ್ರದೇಶದಲ್ಲಿರುವ ಕಪ್ಪು ಚಿರತೆಯ ಚಿತ್ರದೊಂದಿಗೆ ಈ ಪುಸ್ತಕ ಆರಂಭವಾಗುತ್ತದೆ. ನಾಗಪುರ ಸಮೀಪದ ತಡೋಬಾ, ರಣಥಂಬೋರ್, ಹಂಪಿ ಮತ್ತು ರಾಮನಗರಗಳಲ್ಲಿ ಸೆರೆಹಿಡಿದ ಆನೆ, ಚಿರತೆ, ಕರಡಿ, ಹದ್ದು , ಕಾಡುಕೋಣ, ಸೀಳುನಾಯಿ ಮತ್ತು ಹಕ್ಕಿಗಳ ಲೋಕ ಗಮನಸೆಳೆಯುತ್ತವೆ.

‘ರಜೆಗಳನ್ನು ಕಳೆಯಲು ಅಪ್ಪ ಕುಟುಂಬವನ್ನು ಯಾವಾಗಲೂ ರಾಷ್ಟ್ರೀಯ ಸಂರಕ್ಷಿತ ಅರಣ್ಯಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅದರಿಂದಾಗಿ ಬಾಲ್ಯದಿಂದಲೂ ಕಾಡಿನ ನಂಟು ಬೆಳೆಯಿತು. 13 ವರ್ಷದವನಿದ್ದಾಗ ನನ್ನ ಏಕತಾನತೆ ಕಳೆಯಲು ಅಪ್ಪ ಕ್ಯಾಮೆರಾ ನೀಡಿ ಫೋಟೊ ತೆಗೆಯಲು ಪ್ರೇರೆಪಿಸಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರಕೃತಿಯೊಂದಿಗಿನ ನಂಟು ಬೆಸೆದು ಕೊಂಡಿದೆ’ ಎಂದು ಇಂಟರ್‌ನ್ಯಾಷನಲ್ ಸ್ಕೂಲ್ ಆಫ್‌ ಬೆಂಗಳೂರಿನ 12ನೇ ತರಗತಿಯಲ್ಲಿರುವ ಮಾಯಸ್ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಲಕ್ಷ್ಮಣ್, ‘ಉತ್ತಮ ಛಾಯಾಗ್ರಾಹಕರಾಗಿರುವ ಅನಿಲ್ ಅವರ ಮಗ ಈಗ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಕ್ಕಳು ಗ್ಯಾಜೆಟ್‌ಗಳಲ್ಲಿ ಕಳೆದುಹೋಗುವ ಬದಲು ಇಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ’ ಎಂದರು.

ಛಾಯಾಗ್ರಹಣ ಮಾರ್ಗದರ್ಶಕರಾಗಿರುವ ಜಯಂತ್ ಶರ್ಮಾ, ಅನಿಲ್ ಕುಂಬ್ಳೆಯವರ ಪತ್ನಿ ಚೇತನಾ, ಮಗಳು ಸ್ವಸ್ಥಿ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.