ADVERTISEMENT

ರಾಜ್ಯದಲ್ಲಿರುವ ಎಲ್ಲಾ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 23:38 IST
Last Updated 26 ಏಪ್ರಿಲ್ 2025, 23:38 IST
<div class="paragraphs"><p>ಉಡುಪಿ ನಗರದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ	</p></div>

ಉಡುಪಿ ನಗರದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ

   

– ಪ್ರಜಾವಾಣಿ ಚಿತ್ರ/ ಹೇಮನಾಥ್‌ ಪಡುಬಿದ್ರಿ

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು (ಎಎನ್‌ಎಂ) ಮುಚ್ಚಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ಎರಡು ವರ್ಷಗಳ ಈ ಕೋರ್ಸ್‌ಗೆ ಜನವರಿಯಲ್ಲೇ ಪ್ರವೇಶ ಪಡೆದು, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು, ಇದೇ ತಿಂಗಳ 28ರಿಂದ ಆಂತರಿಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕೇಂದ್ರಗಳನ್ನೇ ಮುಚ್ಚಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮಧ್ಯಂತರದಲ್ಲೇ ತರಬೇತಿಯಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿನಿಯರಿಗೆ ರಾಜ್ಯದಲ್ಲಿರುವ 18 ಸರ್ಕಾರಿ ಡಿಪ್ಲೊಮಾ ನರ್ಸಿಂಗ್‌ ಶಾಲೆಗಳಿಗೆ (ಜಿಎನ್‌ಎಂ) ಸೇರಲು ಅವಕಾಶ ನೀಡಿದೆ. ಮೂರು ವರ್ಷಗಳ ಡಿಪ್ಲೊಮಾ ನರ್ಸಿಂಗ್‌ ಸೇರಲು ಬಯಸದವರನ್ನು ಮನೆಗೆ ಕಳುಹಿಸಲು ಸೂಚನೆ ನೀಡಲಾಗಿದೆ. ಅಂಥವರು ತಮ್ಮ ಆಯ್ಕೆಯ ಇತರೆ ಕೋರ್ಸ್‌ಗಳನ್ನು ಸೇರಲು ಮುಕ್ತವಾಗಿರುತ್ತಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತರಬೇತಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತಿರುವ ಕಾರಣ ಕಾನೂನು ತೊಡಕು ಎದುರಾಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಇಲಾಖೆ, ಸ್ವ ಇಚ್ಛೆಯಿಂದ ಡಿಪ್ಲೊಮಾ ನರ್ಸಿಂಗ್‌ಗೆ ಸೇರುತ್ತಿರುವುದಾಗಿ ವಿದ್ಯಾರ್ಥಿಗಳಿಂದ ಹಾಗೂ ಅವರ ಪಾಲಕರಿಂದ ಸಮ್ಮತಿ ಪತ್ರ ಬರೆಸಿಕೊಳ್ಳಲು ಹೇಳಿದೆ. 

ಇದೊಂದು ಬಾರಿ ಅವಕಾಶ: 

ಡಿಪ್ಲೊಮಾ ನರ್ಸಿಂಗ್‌ ಶಾಲೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುತ್ತವೆ. ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಆರೋಗ್ಯ ಇಲಾಖೆ ನಿರ್ವಹಿಸುತ್ತಿದೆ. ಈ ಕೇಂದ್ರಗಳನ್ನು ಮುಚ್ಚುತ್ತಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಅಲ್ಲಿನ ವಿದ್ಯಾರ್ಥಿನಿಯರನ್ನು ದಾಖಲು ಮಾಡಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. 

‘ಕಲಾ, ವಾಣಿಜ್ಯ ಅಥವಾ ವಿಜ್ಞಾನ ಯಾವುದೇ ವಿಷಯದಲ್ಲಿ ದ್ವಿತೀಯ ಪಿಯು ತೇರ್ಗಡೆಯಾದವರು ಎಎನ್‌ಎಂ ತರಬೇತಿಗೆ ಸೇರುತ್ತಿದ್ದರು. ಈ ತರಬೇತಿ ಪಡೆಯುತ್ತಿರುವವರಲ್ಲಿ ಗ್ರಾಮೀಣ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡಿಪ್ಲೊಮಾ ನರ್ಸಿಂಗ್‌ ಇಲ್ಲ. ಹಾಗಾಗಿ, ನಮ್ಮ ಮಗಳನ್ನು ಬೇರೆ ಜಿಲ್ಲೆಗೆ ಕಳುಹಿಸುವುದಿಲ್ಲ. ತರಬೇತಿ ಅರ್ಧಕ್ಕೆ ಸ್ಥಗಿತವಾಗುತ್ತಿರುವುದು ಬೇಸರ ತರಿಸಿದೆ’ ಎಂದು ರಾಯಚೂರು ಜಿಲ್ಲೆಯ ಪೋಷಕ ದೇನ್ಯಾ ನಾಯಕ್‌ ಬೇಸರ ತೋಡಿಕೊಂಡರು.

ಡಿಪ್ಲೊಮಾ ನರ್ಸಿಂಗ್‌ ಸೇರಲು ಹಿಂದೇಟು

ಆರೋಗ್ಯ ಇಲಾಖೆ ಎಎನ್‌ಎಂ ತರಬೇತಿ ಕೇಂದ್ರದ ವಿದ್ಯಾರ್ಥಿನಿಯರಿಗೆ ಡಿಪ್ಲೊಮಾ ನರ್ಸಿಂಗ್‌ ಸೇರಲು ಅವಕಾಶ ನೀಡಿದ್ದರೂ, ಬಹುತೇಕ ವಿದ್ಯಾರ್ಥಿನಿಯರು ಹಿಂದೇಟು ಹಾಕಿದ್ದಾರೆ.

‘ಎಎನ್‌ಎಂ ತರಬೇತಿ ಎರಡು ವರ್ಷ ಇರುತ್ತದೆ. ಕನ್ನಡದಲ್ಲೂ ಪಾಠ, ಓದಿಗೆ ಅವಕಾಶ ಇದೆ. ಡಿಪ್ಲೊಮಾ ನರ್ಸಿಂಗ್‌ ಮೂರು ವರ್ಷ ಇರುತ್ತದೆ. ಇಂಗ್ಲಿಷ್‌ ಮಾಧ್ಯಮ ಮಾತ್ರವಿದೆ. ಗ್ರಾಮಿಣ ಪ್ರದೇಶದಿಂದ ಬಂದು ಕನ್ನಡ ಮಧ್ಯಮ ಕಲಿತ ನಮಗೆ ಡಿಪ್ಲೊಮಾ ಕಷ್ಟವಾಗುತ್ತದೆ. 2024ರ ನವೆಂಬರ್‌ನಲ್ಲಿ ಅರ್ಜಿ ಕರೆದಾಗ ಪದವಿ ಕಾಲೇಜು ತೊರೆದು ಇಲ್ಲಿಗೆ ಬಂದೆವು. ಅರ್ಜಿ ಕರೆಯುವ ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ ಅಲ್ಲೇ ಓದು ಮುಂದುವರಿಸುತ್ತಿದ್ದೆವು. ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಾಗಿದೆ’ ಎಂದು ಹಲವು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

ಗ್ರಾಮೀಣ ಆರೋಗ್ಯದ ಆಧಾರ ಸ್ತಂಭ

ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಆರೋಗ್ಯ ಸಹಾಯಕಿಯರ ಮಾತ್ರ ಮಹತ್ವದಾಗಿದೆ. ಎಎನ್‌ಎಂ ತರಬೇತಿ ಪಡೆದವರು ದಶಕಗಳಿಂದಲೂ ಗ್ರಾಮಗಳಲ್ಲಿ ವೈದ್ಯರಂತೆಯೇ ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಈ ಹುದ್ದೆಗಳನ್ನು ಈಚೆಗೆ ‘ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ’ ಎಂದು ನಾಮ ಬದಲಾವಣೆ ಮಾಡಲಾಗಿತ್ತು. ಇನ್ನು ಮುಂದೆ ಆರೋಗ್ಯ ಸುರಕ್ಷಾಧಿಕಾರಿ ನೇಮಕಾತಿಗೆ ಎಎನ್‌ಎಂ ತರಬೇತಿ ಅಗತ್ಯವಿಲ್ಲದ ಕಾರಣ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.