
ಬೆಳಗಾವಿ: ‘ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಸ್ವಚ್ಛ ವಿಧಾನಸಭೆ ಆಂದೋಲನ’ ಕೈಗೊಂಡಿರುವ ಐ.ಟಿ ಉದ್ಯೋಗಿ ನಾಗರಾಜ ಕಲಕುಟಗರ, ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ ಧರಣಿ ನಡೆಸಿದರು.
ಹೆಗಲ ಮೇಲೆ ರಾಷ್ಟ್ರಧ್ವಜ ಮತ್ತು ಕರ್ನಾಟಕ ಧ್ವಜ ಏರಿಸಿಕೊಂಡಿದ್ದರು. ಪ್ರಜಾಪ್ರಭುತ್ವ ಉಳಿವಿಗಾಗಿ ಭ್ರಷ್ಟರಲ್ಲದ ಪ್ರಬುದ್ಧ– ಜನಪರ– ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ. ಸ್ವಚ್ಛ ವಿಧಾನಸಭೆ ಅಭಿಯಾನ; ನನ್ನ ಮತ ಮಾರಾಟಕ್ಕೆ ಇಲ್ಲ’ ಎಂಬ ಭಿತ್ತಿಪತ್ರ ಪ್ರದರ್ಶಿಸಿದರು.
ಬಾಗಲಕೋಟೆಯವರಾದ ನಾಗರಾಜ ಎಂ. ಎಸ್ಸಿ, ಎಂ.ಟೆಕ್ ಪದವೀಧರ. ಏರೋಸ್ಪೇಸ್ ಎಂಜಿನಿಯರ್ ಆಗಿರುವ ಅವರು, ಐ.ಟಿ ಕಂಪನಿಗಳಲ್ಲಿ ನೌಕರಿ ಗಿಟ್ಟಿಸಿ ಲಕ್ಷಗಟ್ಟಲೇ ಸಂಬಳ ಪಡೆದವರು. ಜರ್ಮನಿಯಲ್ಲೂ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದ ಅಣ್ಣಾ ಹಜಾರೆ ಅವರಿಂದ ಪ್ರಭಾವಿತರಾದರು. ನೌಕರಿ ಬಿಟ್ಟು ಆಂದೋಲನ ಶುರು ಮಾಡಿದರು. ನಾಗರಾಜ ಅವರೊಂದಿಗೆ ಇತರ ಎಂಟು ಎಂಜಿನಿಯರ್‌ಗಳೂ ಕೈ ಜೋಡಿಸಿದ್ದಾರೆ.
‘ಫೆ.16ರಂದು ಬೆಂಗಳೂರು ವಿಧಾನಸೌಧದಿಂದ ಪಾದಯಾತ್ರೆ ಆರಂಭಿಸಿದ್ದೇನೆ. ಈಗಾಗಲೇ 18 ಜಿಲ್ಲಾ ಕೇಂದ್ರಗಳಿಗೆ 2,300 ಕಿ.ಮೀ. ಪಾದಯಾತ್ರೆ ಮಾಡಿ, ಈಗ ಬೆಳಗಾವಿ ತಲುಪಿದ್ದೇನೆ. ಎಲ್ಲ ಕ್ಷೇತ್ರಗಳಿಗೆ ಭೇಟಿನೀಡುತ್ತೇನೆ. ಜನರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸುತ್ತೇನೆ’ ಎಂದು ನಾಗರಾಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.